ಶಿವಮೊಗ್ಗ: ಆಪಾದಿತ ಲೈಂಗಿಕ ಹಗರಣ ಪ್ರಕರಣದಲ್ಲಿ ಗುರಿಯಾಗಿರುವ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅವರ ಪರವಾಗಿ ಮತಯಾಚನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಇಂದು ಮಾತನಾಡಿದ ಅವರು,ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿದ್ದಾರೆ. ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ ಎಂದರು.
33 ವರ್ಷದ ಸಂಸದರು ಭಾಗಿಯಾಗಿದ್ದಾರೆ ಎನ್ನಲಾದ ಹಲವು ಸ್ಪಷ್ಟ ವಿಡಿಯೋ ತುಣುಕುಗಳು ಇತ್ತೀಚಿನ ದಿನಗಳಲ್ಲಿ ಹಾಸನದಲ್ಲಿ ಭಾರೀ ಪ್ರಮಾಣದಲ್ಲಿ ವೈರಲ್ ಆಗಿದ್ದು, ಏಪ್ರಿಲ್ 26 ರಂದು ಮತದಾನ ನಡೆದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಅವರು ಎನ್‌ಡಿಎ ಅಭ್ಯರ್ಥಿಯಾಗಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜೆಡಿ(ಎಸ್) ಎನ್‌ಡಿಎ ಜೊತೆ ಸೇರಿತ್ತು ಎಂದರು.
“ಪ್ರಜ್ವಲ್ ರೇವಣ್ಣ ಅವರು 400 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ವಿಡಿಯೋ ಮಾಡಿದ್ದಾರೆ. ಇದು ಲೈಂಗಿಕ ಹಗರಣವಲ್ಲ ಸಾಮೂಹಿಕ ಅತ್ಯಾಚಾರ. ಕರ್ನಾಟಕದ ಜನರ ಮುಂದೆ ಪ್ರಧಾನಿ ಈ ಸಾಮೂಹಿಕ ಅತ್ಯಾಚಾರಿಯನ್ನು ಬೆಂಬಲಿಸಿ ಮತ ಕೇಳುತ್ತಿದ್ದರು ಎಂದು ತಿಳಿಸಿದರು.
ಈ ಸಾಮೂಹಿಕ ಅತ್ಯಾಚಾರಿಗೆ ಮತ ನೀಡಿ, ಅದು ಅವರಿಗೆ ಸಹಾಯ ಮಾಡುತ್ತದೆ ಎನ್ನುವುದಾಗಿ ಮೋದಿ ಹೇಳಿದ್ದರು ಎಂದು ರಾಹುಲ್ ಗಾಂಧಿ ಕರ್ನಾಟಕದ ಶಿವಮೊಗ್ಗದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಗುಡುಗಿದರು.