ಬೆಂಗಳೂರು :ಬೀದಿ ನಾಯಿಗಳಿಗೆ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಊಟ ಹಾಕುವಂತಿಲ್ಲ. ಬೀದಿ ನಾಯಿಗಳಿಗೆ ಊಟ ಹಾಕಲು ವೇಳಾಪಟ್ಟಿ ನಿಗದಿ ಮಾಡಲು ಬಿಬಿಎಂಪಿ ಉದ್ದೇಶಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವುದರ ಬಗ್ಗೆಯೂ ಪಾಲಿಕೆ ಚಿಂತನೆ ನಡೆಸಿದ್ದು, ಬೀದಿ ನಾಯಿಗಳಿಗೆ ಊಟ ಹಾಕುವ ವಿಚಾರದಲ್ಲಿ ನಿಯಮ ರೂಪಿಸುವಂತೆ ಅಪಾರ್ಟ್‌ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಒತ್ತಾಯಿಸಿದ್ದವು. ಅಪಾರ್ಟ್‌ಮೆಂಟ್ ನಿವಾಸಿಗಳು ನಾಯಿಗಳಿಗೆ ಊಟ ಹಾಕುವ ವಿಚಾರ ಹಲವು ಬಾರಿ ವಿವಾದಕ್ಕೆ ಕಾರಣವಾಗಿದ್ದವು. ಅಪಾರ್ಟ್‌ಮೆಂಟ್ ಎದುರು ಆಹಾರ ಹಾಕುವುದರಿಂದ ಬೀದಿ ನಾಯಿಗಳು ಅಲ್ಲೇ ಸುತ್ತಾಡುವುದು, ಆಹಾರಕ್ಕಾಗಿ ಕಿತ್ತಾಡುವುದು ಮತ್ತಿತರ ವಿಚಾರದಲ್ಲಿ ವಿವಾದಗಳು ಉದ್ಭವಿಸಿದ್ದವು.
ಈ ಹಿಂದೆ ಬೆಂಗಳೂರಿನಲ್ಲಿ 3.10 ಲಕ್ಷ ಬೀದಿ ನಾಯಿಗಳಿದ್ದವು. ಈಗ ಬೀದಿನಾಯಿಗಳ ಸಂಖ್ಯೆ ಇಳಿಕೆಯಾಗಿದ್ದು, ಸದ್ಯ 2,79,335 ಶ್ವಾನಗಳಿವೆ. ಈ ಪೈಕಿ 1,65,341 ಗಂಡು ನಾಯಿಗಳು ಹಾಗೂ 82,757 ಹೆಣ್ಣು ನಾಯಿಗಳಿವೆ. ಪಾಲಿಕೆಯು ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 77,555 ಶ್ವಾನಗಳಿಗೆ ಆ್ಯಂಟಿ ರೇಬಿಸ್ ವ್ಯಾಕ್ಸಿನೇಷನ್ (ಎಆರ್‌ವಿ) ಹಾಕಿದೆ. ಈ ಪೈಕಿ ಶೇ.70ರಷ್ಟು ಶ್ವಾನಗಳಿಗೆ ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆ ನಡೆಸಿದೆ.
ಕೆಲ ಬಾರಿ ನಿವಾಸಿಗಳ ನಡುವೆ, ಇನ್ನು ಕೆಲವೊಮ್ಮೆ ಅಪಾರ್ಟ್‌ಮೆಂಟ್ ನಿವಾಸಿಗಳು ಹಾಗೂ ಪ್ರಾಣಿಪ್ರಿಯರ ನಡುವೆ ವಿವಾದ ಉಂಟಾಗಿದ್ದವು. ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕುವುದುರಿಂದ ನಗರದ ಸೌಂಧರ್ಯಕ್ಕೂ ಧಕ್ಕೆ ತರುತ್ತಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಶು ಸಂಗೋಪನೆ ಇಲಾಖೆ ನಿಯಮ ರೂಪಿಸಲು ಮುಂದಾಗಿದೆ.