ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿರುವ ಬುಧಪುರ ಗ್ರಾಮವನ್ನು ವಿಧವೆಯರ ಗ್ರಾಮ ಎಂದೂ ಕರೆಯುತ್ತಾರೆ. ಹೌದು, ಈ ಗ್ರಾಮದಲ್ಲಿ ವಾಸಿಸುವ ಬಹುತೇಕ ಮಹಿಳೆಯರು ವಿಧವೆಯರು. ಮದುವೆಯಾದ ಕೆಲವೇ ದಿನಗಳಲ್ಲಿ ಇಲ್ಲಿ ಗಂಡಂದಿರು ಸಾಯುವುದರಿಂದ ಬಹಳಷ್ಟು ಮಹಿಳೆಯರು ಚಿಕ್ಕ ವಯಸ್ಸಿನಲ್ಲೇ ವಿಧವೆಯರಾಗುತ್ತಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಯಾವುದೋ ಶಾಪಗ್ರಸ್ಥ ಹಳ್ಳಿ ಅಂತ ನೀವು ಅಂದುಕೊಂಡರೆ ಅದು ಸುಳ್ಳು. ಯಾಕೆಂದರೆ ಇಲ್ಲಿ ಪುರುಷರು ಚಿಕ್ಕ ವಯಸ್ಸಿನಲ್ಲಿ ಸಾಯಲು ಬಲವಾದ ಕಾರಣವಿದೆ.
ಈ ಗ್ರಾಮದಲ್ಲಿ ಬಹುತೇಕ ವಿಧವೆ ಮಹಿಳೆಯರು ಜೀವನ ನಡೆಸುತ್ತಿದ್ದು, ಯಾವುದೇ ರೀತಿಯ ಸಹಾಯ ಸಿಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಗಂಡ ಸತ್ತ ಮೇಲೂ ಇಲ್ಲಿನ ಹೆಂಗಸರೆಲ್ಲ ಗಣಿ ಕೆಲಸ ಮಾಡಿ ಮಕ್ಕಳನ್ನು ಸಾಕಬೇಕು. ಈ ಗಣಿಗಳಲ್ಲಿ ಮರಳುಗಲ್ಲು ಒಡೆಯುವ ಕೆಲಸ ಹಲವು ಗಂಟೆಗಳ ಕಾಲ ನಡೆಯುತ್ತದೆ.
ಈ ಕಲ್ಲುಗಳನ್ನು ಕೆತ್ತುವಾಗ ಹೊರಬರುವ ಧೂಳಿನಿಂದ ಕಾರ್ಮಿಕರ ಶ್ವಾಸಕೋಶದಲ್ಲಿ ಸೋಂಕು ಉಂಟಾಗುತ್ತದೆ. ಚಿಕಿತ್ಸೆ ನೀಡಿದರೆ ಅವರ ಜೀವ ಉಳಿಯುತ್ತದೆ. ಇಲ್ಲದಿದ್ದರೆ ಸಾವು ಖಚಿತ.
ಅನೇಕ ವರದಿಗಳ ನಂತರ, ಇಲ್ಲಿ ಪುರುಷರು ಸಿಲಿಕೋಸಿಸ್ ಎಂಬ ಕಾಯಿಲೆಯಿಂದ ಸಾಯುತ್ತಾರೆ ಎಂಬುದು ಸ್ಪಷ್ಟವಾಗಿದ್ದು, ಸಿಲಿಕೋಸಿಸ್ ಎನ್ನುವುದು ಸ್ಫಟಿಕದಂತಹ ಸಿಲಿಕಾ ಧೂಳಿನಿಂದ ಉಂಟಾಗುವ ಶ್ವಾಸಕೋಶದ ಕಾಯಿಲೆಯ ಒಂದು ರೂಪವಾಗಿದ್ದು, ವಾಸ್ತವವಾಗಿ, ಈ ಗ್ರಾಮದ ಹೆಚ್ಚಿನ ಪುರುಷರು ಗಣಿಗಳಲ್ಲಿ ಕೆಲಸ ಮಾಡುತ್ತಾರೆ.
ಗಣಿಗಳಲ್ಲಿ ಕೆಲಸ ಮಾಡುವವರಿಗೆ ಈ ಶ್ವಾಸಕೋಶ ಸಂಬಂಧಿ ರೋಗ ಬರುತ್ತಿದ್ದು, ಸರ್ಕಾರದಿಂದ ಯಾವುದೇ ಸೌಲಭ್ಯಗಳು ಈ ಗ್ರಾಮಕ್ಕೆ ಸಿಗದೇ ಇರುವ ಕಾರಣ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪುತ್ತಿದ್ದಾರೆ ಎಂದು ಮಾಹಿತಿ ಕಂಡು ಬಂದಿದೆ.