ಮೈಸೂರು: ಕನ್ನಡದ ಹಿರಿಯ ನಟ, ಸಾಹಸ ಸಿಂಹ ವಿಷ್ಣುವರ್ದನ್ ಅವರ ಸ್ಮಾರಕವನ್ನು ಮೈಸೂರಿನ ಹೊರವಲಯದಲ್ಲಿ ರಾಜ್ಯ ಸರ್ಕಾರ ನಿರ್ಮಿಸಿದ್ದು, ಕಳೆದ ವರ್ಷ ಜನವರಿಯಲ್ಲಿ ಉದ್ಘಾಟನೆಗೊಂಡಿತ್ತು.
ಆ ಸ್ಮಾರಕ ಸೂಕ್ತ ನಿರ್ವಹಣೆಯಿಲ್ಲದೇ ಇಂದು ಶಿಥಿಲಾಗುತ್ತಿದೆ ಎಂದು ಅಭಿಮಾನಿಯೊಬ್ಬರು ದೂರಿದ್ದಾರೆ. ಈ ಕುರಿತಂತೆ, ಟ್ವಿಟರ್ ನಲ್ಲಿ ತಾವು ಅಲ್ಲಿಗೆ ಭೇಟಿ ನೀಡಿದ್ದನ್ನು ಉಲ್ಲೇಖಿಸಿರುವ ಅವರು, ಒಂದು ಸ್ಮಾರಕ ಹೇಗೆ ನಿರ್ಮಿಸಬಾರದು ಎಂಬುದಕ್ಕೆ ಇದು ಸೂಕ್ತ ಉದಾಹರಣೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
2009ರ ಡಿಸೆಂಬರ್ 30ರಂದು ನಿಧನರಾಗಿದ್ದ ಡಾ. ವಿಷ್ಣುವರ್ದನ್ ಅವರ ಸ್ಮಾರಕವನ್ನು ನಿರ್ಮಿಸಬೇಕೆಂದು ಅವರ ಅಭಿಮಾನಿಗಳು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿತ್ತು. ಅದರಂತೆ, ಮೈಸೂರಿನ ಹೊರವಲಯದಲ್ಲಿರುವ ಮಾನಂದವಾಡಿ ರಸ್ತೆಯ ಹಾಲಾಳು ಗ್ರಾಮದ ಉದ್ಬೂರ್ ಗೇಟ್ ಎಂಬಲ್ಲಿ ಸ್ಮಾರಕವನ್ನು ನಿರ್ಮಿಸಿತು. ಅದರ ಉದ್ಘಾಟನೆ 2023ರ ಜ. 29ರಂದು ಉದ್ಘಾಟಿಸಲಾಗಿತ್ತು. ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಸ್ಮಾರಕವನ್ನು ಉದ್ಘಾಟಿಸಿದ್ದರು.
ಈ ಸಮಾರಂಭದಲ್ಲಿ ಮೈಸೂರಿನ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿಟಿ ದೇವೇಗೌಡ, ಮಾಜಿ ಸಚಿವ ಎಸ್.ಎ ರಾಮದಾಸ್, ಎಲ್, ನಾಗೇಂದ್ರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಜೊತೆಗೆ, ಚಿತ್ರರಂಗದಲ್ಲಿ ವಿಷ್ಣುವರ್ದನ್ ರವರ ಆಪ್ತರೆಂದೇ ಗುರುತಿಸಿಕೊಂಡಿರುವ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಟಿ ಭವ್ಯಾ, ರಮೇಶ್ ಭಟ್ ಹಾಗೂ ವಿಷ್ಣುವರ್ದನ್ ಕುಟುಂಬದ ಸದಸ್ಯರು ಹಾಜರಿದ್ದರು.