ಜಾಗತಿಕ ಪರಿಶೀಲನೆಗೂ ಮುನ್ನವೇ ಅಮೆರಿಕದಲ್ಲಿ ಎಂಡಿಎಚ್ ಸಾಂಬಾರ್ ಮಸಾಲ ಪದಾರ್ಥಗಳು ತಿರಸ್ಕೃತಗೊಂಡಿದ್ದು, ಈ ಮಸಾಲಗಳಲ್ಲಿ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಕಂಡುಬಂದಿದ್ದರಿಂದ ಅಮೆರಿಕದ ಆಹಾರ ಹಾಗೂ ಔಷಧ ಆಡಳಿತ ನಿಷೇಧ ಹೇರಿದ್ದು, ಬ್ಯಾಕ್ಟೀರಿಯಾ ಪತ್ತೆಯಾದ ಸಾಂಬಾರ್ ಮಸಾಲವನ್ನು ಉತ್ತರ ಕ್ಯಾಲಿಫೋರ್ನಿಯಾದಲ್ಲಿ ವಿತರಿಸಲಾಗಿತ್ತು ಎಂದು ಆನ್ಲೈನ್ ಮಾರಾಟ ಮಳಿಗೆ ಹೌಸ್ ಆಫ್ ಸ್ಪೈಸಸ್ ತಿಳಿಸಿತ್ತು. ಸದ್ಯ ಅಲ್ಲಿಂದ ಉತ್ಪನ್ನಗಳನ್ನು ಹಿಂಪಡೆಯಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಹಾಂಗ್ಕಾಂಗ್ ಕಳೆದ ತಿಂಗಳು ಎಂಡಿಎಚ್ ಹಾಗೂ ಇನ್ನೊಂದು ಭಾರತೀಯ ಕಂಪನಿ ಎವರೆಸ್ಟ್ನಿಂದ ತಯಾರಿಸಿದ ಮೂರು ಮಸಾಲೆ ಪದಾರ್ಥಗಳ ಮಿಶ್ರಣಗಳ ಮಾರಾಟವನ್ನು ಸ್ಥಗಿತಗೊಳಿಸಿತು. ಇದರಲ್ಲಿ ಕ್ಯಾನ್ಸರ್ ಉಂಟು ಮಾಡುವ ಕೀಟನಾಶಕಗಳನ್ನು ಹೊಂದಿತ್ತು. ಎಥಲೀನ್ ಆಕ್ಸೈಡ್ ಮಾನವನ ಬಳಕೆಗೆ ಅನರ್ಹವಾಗಿದೆ ಮತ್ತು ದೀರ್ಘಕಾಲ ಬಳಕೆ ಮಾಡಿದರೆ ಕ್ಯಾನ್ಸರ್ ಅಪಾಯವಿದೆ ಎಂದು ಹೇಳಲಾಗಿತ್ತು.
ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಸಾಲ್ಮೋನೆಲ್ಲಾ ಎಂಬುದು ಬ್ಯಾಕ್ಟೀರಿಯಾ, ಆಹಾರಗಳ ಮೂಲಕ ಪಸರಿಸುವ ಸೋಂಕು ಇದಾಗಿದೆ. ಸಾಲ್ಮೋನಲ್ ಸೋಂಕು ತಗುಲಿ 12 ಗಂಟೆಯ ಬಳಿಕ ಅತಿಸಾರ, ಬೇಧಿ, ಹೊಟ್ಟೆನೋವು, ಜ್ವರ ಕಾಣಿಸಿಕೊಳ್ಳುತ್ತದೆ, ಕೆಲವೊಮ್ಮೆ ಆರೋಗ್ಯ ಸ್ಥಿತಿ ಗಂಭೀರ ಸ್ಥಿತಿಗೂ ತಲುಪುತ್ತದೆ.
ಮಸಾಲೆ ಸಂಗ್ರಹಿಸುವ, ಸಂಸ್ಕರಿಸುವ ಅಥವಾ ಪ್ಯಾಕಿಂಗ್ ಮಾಡುವ ಯಾವುದೇ ಹಂತದಲ್ಲಿ ಎಥಲೀನ್ ಅಕ್ಸೈಡ್ಗಳನ್ನು ಬಳಸುವುದಿಲ್ಲ ಎಂದು ಎಂಡಿಎಚ್ ಹೇಳಿದೆ. ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ ಹಾಗೂ ಭಾರತದ ಅಧಿಕಾರಿಗಳು ಈ ವಿಷಯವನ್ನು ಪರಿಶೀಲಿಸುತ್ತಿದ್ದು, ಎರಡೂ ಬ್ರ್ಯಾಂಡ್ಗಳು ಭಾರತದಲ್ಲಿ ಜನಪ್ರಿಯವಾಗಿವೆ ಹಾಗೂ ಪ್ರಪಂಚಾದ್ಯಂತ ರಫ್ತಾಗುತ್ತಿದೆ.
ಹಾಂಗ್ಕಾಂಗ್ ಹಾಗೂ ಸೀಮಗಾಪುರದಲ್ಲಿ ಎಂಡಿಎಚ್ ಹಾಗೂ ಎವರೆಸ್ಟ್ ಮಸಾಲೆ ಪದಾರ್ಥಗಳಿಗೆ ನಿಷೇಧ ಹೇರುವುದಕ್ಕೆ ಸಂಬಂಧಿಸಿದಂತೆ ಅಲ್ಲಿನ ಆಹಾರ ಸುರಕ್ಷತೆ ಕೇಂದ್ರಗಳು ಸಿದ್ಧಪಡಿಸಿರುವ ವರದಿಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಪರಿಶೀಲನೆಗೂ ಮುನ್ನವೇ ಅಮೆರಿಕ ಈ ಮಸಾಲೆ ಪದಾರ್ಥಗಳನ್ನು ತಿರಸ್ಕರಿಸಿದೆ ಎಂದು ಮಾಹಿತಿ ಕಂಡು ಬಂದಿದೆ.