ಹಿಂದೂ ಧರ್ಮದಲ್ಲಿ ನಾವು ಶಾಸ್ತ್ರಗಳ ಪಾಲನೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದು, ಜೊತೆಗೆ ಕೆಲವು ರೂಢಿಯಲ್ಲಿ ಬಂದಂತಹ ಆಚರಣೆಗಳನ್ನು ಕೂಡ ಪಾಲಿಸುತ್ತೇವೆ. ಅದರಲ್ಲಿ ಮಹಿಳೆಯರು ದೇವರು, ಗುರುಗಳ ಮುಂದೆ ನಿಂತಾಗ, ದೇವರ ಪ್ರಸಾದ ಅಥವಾ ಬಾಗಿನಗಳನ್ನು ತೆಗೆದುಕೊಳ್ಳುವಾಗ ಸೀರೆಯ ಸೆರಗನ್ನು ಭುಜದ ಮೇಲೆ ಹಾಕಿ ಅದರಲ್ಲಿಯೇ ಪ್ರಸಾದ, ಮಂತ್ರಾಕ್ಷತೆ ತೆಗೆದುಕೊಳ್ಳುವ ಕ್ರಮವಿದೆ. ಇದನ್ನು ಯಾಕಾಗಿ ಪಾಲನೆ ಮಾಡಲಾಗುತ್ತದೆ? ಹಿನ್ನೆಲೆಯೇನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.
ದೇವರು, ದೈವದ ಪ್ರಸಾದ ಅಥವಾ ಗುರುಗಳ ಮಂತ್ರಾಕ್ಷತೆ ನಮಗೆ ಶ್ರೀರಕ್ಷೆ. ಅದಲ್ಲದೆ ದೇವರು, ಗುರುಗಳು ಅಥವಾ ದೊಡ್ಡವರ ಮುಂದೆ ನಿಂತಾಗ ತಲೆಬಾಗಿ ಸೀರೆಯನ್ನು ಭುಜದ ಮೇಲೆ ಹಾಕಿಕೊಳ್ಳುವುದು ಒಂದು ರೀತಿಯ ಗೌರವ ಕೊಡುವ ರೀತಿ. ಇದು ಒಬ್ಬ ಸ್ತ್ರೀ ತನ್ನ ಮೈ ಮುಚ್ಚಿಕೊಂಡು ತಾನು ಗೌರವದಿಂದ ಮುಂದಿರುವವವರಿಗೆ ಗೌರವ ಕೊಡುವ ಒಂದು ಕ್ರಮವಾಗಿದೆ. ಅಲ್ಲದೆ ಸೆರಗು ಒಡ್ಡಿ ಪ್ರಸಾದ ತೆಗೆದುಕೊಳ್ಳುವುದು ಮುತ್ತೈದೆಗೆ ಶೋಭೆಯನ್ನು ನೀಡುತ್ತದೆ.
ಆಕೆ ಮದುವೆಯಾದ ಬಳಿಕ ಒಂದು ಕೈಯಲ್ಲಿ ಪ್ರಸಾದ ತೆಗೆದುಕೊಳ್ಳಬಾರದು ಎನ್ನಲಾಗುತ್ತಿದ್ದು, ಜೊತೆಗೆ ಪ್ರಸಾದ ಎಲ್ಲಿಯೂ ಚೆಲ್ಲದಿರಲಿ ಎಂಬುದು ಹಿಂದಿರುವ ನಂಬಿಕೆ. ಈ ರೀತಿ ಮಾಡುವುದರಿಂದ ಪ್ರಸಾದ, ಹೂವು ಅಥವಾ ಮಂತ್ರಾಕ್ಷತೆ ಎಲ್ಲಿಯೂ ಚೆಲ್ಲುವುದಿಲ್ಲ. ಅದಲ್ಲದೆ ಕೈಯಲ್ಲಿ ತೆಗೆದುಕೊಂಡರೆ ಅರಿತೋ ಅರಿಯದೆಯೇ ಕೈಯಿಂದ ಪ್ರಸಾದ ಜಾರಬಹುದು ಅದನ್ನು ಮತ್ತೊಂದಿಷ್ಟು ಜನ ಮೆಟ್ಟಿ ತಿರುಗಾಡಬಹುದು.
ಹಿಂದೆ ನಮ್ಮ ಪೂರ್ವಜರು ಮಾಡಿಕೊಂಡು ಬಂದಂತಹ ಕೆಲವು ಪದ್ದತಿಗಳನ್ನು ನಾವು ಇನ್ನು ರೂಢಿಯಲ್ಲಿ ಇಟ್ಟುಕೊಂಡಿದ್ದೇವೆ. ಅವುಗಳಲ್ಲಿ ಕೆಲವನ್ನು ನಾವು ಪಾಲಿಸುತ್ತೇವೆ ಆದರೆ ಅದರ ಹಿಂದಿರುವ ಅರ್ಥ ತಿಳಿದಿರುವುದಿಲ್ಲ. ಅದರಲ್ಲಿ ಮದುವೆಯಾದ ಮಹಿಳೆಯರು, ದೇವರು ಅಥವಾ ಗುರುಗಳ ಮುಂದೆ ಪ್ರಸಾದ ತೆಗೆದುಕೊಳ್ಳುವಾಗ ಸೆರಗನ್ನು ಒಡ್ಡಿ ಪ್ರಸಾದ ಸ್ವೀಕರಿಸುವ ಪದ್ಧತಿಯೂ ಒಂದು. ಇದನ್ನು ಇಂದಿಗೂ ಪಾಲಿಸಲಾಗುತ್ತದೆ. ಇದರ ಹಿಂದಿರುವ ಕಾರಣ ಕೆಲವರಿಗೆ ಅಷ್ಟು ಸಮಂಜಸ ಎನಿಸದಿರಬಹುದು ಆದರೆ ಇದು ಸತ್ಯ. ಹಾಗಾದರೆ ಸೀರೆಯನ್ನು ಭುಜದ ಮೇಲೆ ಹಾಕಿ ಅದನ್ನು ಒಡ್ಡಿ ಪ್ರಸಾದ ತೆಗೆದುಕೊಳ್ಳುವುದೇಕೆ? ಕೈಯಲ್ಲಿಯೇ ಏಕೆ ತೆಗೆದುಕೊಳ್ಳುವುದಿಲ್ಲ? ಇದಕ್ಕೆಲ್ಲಾ ಸರಿಯಾದ ಮಾಹಿತಿ ಇಲ್ಲಿದೆ.