ಬೆಂಗಳೂರು: ಗ್ಯಾರಂಟಿಗಳ ಯಶಸ್ವಿ ಅನುಷ್ಠಾನದಿಂದ ‘ಕರ್ನಾಟಕ ಮಾಡೆಲ್’ ಇಡೀ ದೇಶದ ಗಮನ ಸೆಳೆದಿದ್ದರೂ ಪ್ರಧಾನಿ ಅಭ್ಯರ್ಥಿ ಸ್ಪರ್ಧೆಯಲ್ಲಿ ನಾನೂ ಒಳಗೊಂಡು ರಾಜ್ಯದಿಂದ ಯಾರೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸರಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೆಂಗಳೂರು ಪ್ರೆಸ್‌ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಭಾಗಿಯಾದ ಅವರು, ಹಲವು ವಿಚಾರ ಪ್ರಸ್ತಾಪಿಸಿದರು. ”ಬಿಜೆಪಿಯಂತೆ 28 ಸ್ಥಾನ ಗೆಲ್ಲುತ್ತೇವೆಂದು ಸುಳ್ಳು ಹೇಳಲ್ಲ. ನಮ್ಮ ನಿರೀಕ್ಷೆ 15 ರಿಂದ 20 ಸ್ಥಾನ,” ಎಂದು ಸ್ಪಷ್ಟ ವಿಶ್ವಾಸ ವ್ಯಕ್ತಪಡಿಸಿದರು.
”ಬಿಜೆಪಿ ನಾಯಕರ ಅಪಪ್ರಚಾರದ ನಡುವೆಯೂ ಗ್ಯಾರಂಟಿಗಳು ಮನೆ ಮನೆ ತಲುಪಿವೆ. ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಗ್ಯಾರಂಟಿ ಕಾರ್ಯಕ್ರಮಗಳು ನಿಲ್ಲುವುದಿಲ್ಲ. ಬಿಜೆಪಿಯವರ ಅಪಪ್ರಚಾರಕ್ಕೆ ಜನ ತಲೆಕೆಡಿಸಿಕೊಳ್ಳಬಾರದಿದ್ದು, ರದ್ದು ಮಾಡುವುದಾಗಿದ್ದರೆ ಬಜೆಟ್‌ನಲ್ಲಿ 52,009 ಕೋಟಿ ರೂ.ಗಳನ್ನು ಏಕೆ ಮೀಸಲಿಡಬೇಕಿತ್ತು? ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ಕೊಳ್ಳುವ ಶಕ್ತಿ ಹೆಚ್ಚಿಸಲು ಜಾರಿ ಮಾಡಿರುವ ಗ್ಯಾರಂಟಿಗಳು ಅಬಾಧಿತ,” ಎಂದು ಸಿಎಂ ಸ್ಪಷ್ಟಪಡಿಸಿದರು.
‘ಗುಜರಾತ್ ಮಾದರಿ’ ಮೂಲಕ ನರೇಂದ್ರ ಮೋದಿ ಅವರು ಪ್ರಧಾನಿ ಸ್ಥಾನಕ್ಕೆ ಮುಂಬಡ್ತಿ ಪಡೆದಂತೆ ನೀವೂ ಪ್ರಧಾನಮಂತ್ರಿ ಆಗುವಿರಾ? ಎಂಬ ಪ್ರಶ್ನೆಗೆ, ”ದೇಶದಲ್ಲಿ’ಗುಜರಾತ್ ಮಾದರಿ’ ಎಂಬುದೇ ಸುಳ್ಳು ಎಂಬುದು ಸಾಬೀತಾಗಿದೆ. ಗ್ಯಾರಂಟಿಗಳ ಯಶಸ್ವಿ ಜಾರಿ ಮೂಲಕ ‘ಕರ್ನಾಟಕ ಮಾದರಿ’ ಜಾರಿಯಲ್ಲಿದೆ ಎಂದರು.
ಐಎನ್‌ಡಿಐಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ರೇಸ್‌ನಲ್ಲಿ ರಾಜ್ಯದಿಂದ ಯಾರೊಬ್ಬರೂ ಇಲ್ಲ. ಕೇಂದ್ರದಲ್ಲಿ ಐಎನ್‌ಡಿಐಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು, ಮಿತ್ರಪಕ್ಷಗಳು ಚರ್ಚಿಸಿ ಪ್ರಧಾನಿ ಯಾರಾಗಬೇಕು ಎಂಬುದನ್ನು ನಿರ್ಧರಿಸಲಾಗುವುದು,” ಎಂದು ಸ್ಪಷ್ಟಪಡಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಎಂಬ ಪ್ರಸ್ತಾಪದ ಹಿನ್ನೆಲೆಯಲ್ಲಿ ಸಿಎಂ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.