ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ದು, ರಾಜಕೀಯ ವಾಗ್ಯುದ್ದಕ್ಕೂ ಕಾರಣವಾಗಿದೆ. ಅಶ್ಲೀಲ ವಿಡಿಯೋಗಳ ಪೆನ್ಡ್ರೈವ್ ಪ್ರಕರಣವನ್ನು ಸಿಬಿಐಗೆ (CBI) ನೀಡಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ರಾಜ್ಯ ಸರ್ಕಾರ ಮಾತ್ರ ಇದಕ್ಕೆ ಒಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದು, ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಈಗಾಗಲೆ ತನಿಖೆ ನಡೆಯುತ್ತಿದೆ. ಆದರೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣ ಹಾಗೂ ಪೆನ್ಡ್ರೈವ್ ಮೂಲಕ ವಿವಿಧಡೆ ಹರಿಬಿಡಲಾಗಿದೆ.
ಹೀಗೆ ಈ ವಿಡಿಯೋಗಳನ್ನು ಹರಿಬಿಟ್ಟು ಮಹಿಳೆಯರ ಮಾನಹಾನಿ ಮಾಡಲಾಗಿದೆ. ಅಷ್ಟೇ ಅಲ್ಲದೆ ಇದರಿಂದ ಹಲವು ಕುಟುಂಬಗಳು ಹಾಳಾಗಿವೆ. ಹೀಗಾಗಿ ವಿಡಿಯೋ ಹರಿಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳಲು ಜೆಡಿಎಸ್ ಲೀಗಲ್ ಟೀಮ್ ಈಗಾಗಲೇ ವಕೀಲರ ಜೊತೆ ಮಾತುಕತೆ ನಡೆಸಿದೆ.
ಈ ಪ್ರಕರಣವನ್ನು ವಿಡಿಯೋಗಳನ್ನು ಹರಿಬಿಟ್ಟವರ ವಿರುದ್ಧ ಕಾನೂನು ಹೋರಾಟ ನಡೆಸಲು ಹೆಚ್ಡಿ ಕುಮಾರಸ್ವಾಮಿ ಸಜ್ಜಾಗಿದ್ದಾರೆ. ಪ್ರಕರಣವನ್ನು ಸಿಬಿಐಗೆ ನೀಡುವಂತೆ ಹೆಚ್ಡಿ ಕುಮಾರಸ್ವಾಮಿಯವರು ನ್ಯಾಯಾಲಯದ ಮೂಲಕ ಸರ್ಕಾರದ ಮೇಲೆ ಒತ್ತಡ ತರಲು ತೀರ್ಮಾನಿಸಿದ್ದಾರೆ ಎಂದು ಮಾಹಿತಿ ಕಂಡು ಬಂದಿದೆ.