ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಟ್ಯಾಕ್ಸ್ ಎಂಬ ಕಮೀಷನ್ ಪದ್ಧತಿ ಇದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಆರ್ ಅಶೋಕ ಅದನ್ನು ದಿಲ್ಲಿಗೆ ಸಾಗಿಸಲು ಸುರಂಗ ರಸ್ತೆ ನಿರ್ಮಾಣ ಮಾಡಲಿ, ಇಲ್ಲದಿದ್ದರೆ ಮೋದಿ ಹಿಡಿಯುತ್ತಾರೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿಜಂಟಿ ಪತ್ರಿಕಾಗೋಷ್ಠಿ ನಡೆಸಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಸರಕಾರದ ವೈಫಲ್ಯಗಳ ಬಗ್ಗೆ ಬೆಳಕು ಚೆಲ್ಲಿದರು. ಸರಕಾರದ ಒಂದು ವರ್ಷದ ಸಾಧನೆ ಶೂನ್ಯ ಎಂಬ ಪೋಸ್ಟರ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್ ಅಶೋಕ, ”ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತಂದು ‘ಬ್ಯಾಡ್ ಬೆಂಗಳೂರು’ ಮಾಡಿದ್ದಾರೆ. ಡೆವಲಪರ್‌ಗಳು ಚದರ ಅಡಿಗೆ 100 ರೂ. ‘ಕಾಂಗ್ರೆಸ್ ಟ್ಯಾಕ್ಸ್’ ಎಂಬ ಕಮಿಷನ್ ಕೊಡಬೇಕಿದೆ. ಈ ಕಮಿಷನ್ ಸಾಗಿಸಲು ಸುರಂಗ ನಿರ್ಮಾಣ ಯೋಜನೆ ಮಾಡಿದ್ದಾರೆ. ಏಕೆಂದರೆ ವಿಮಾನ, ರೈಲಿನಲ್ಲಿ ಹೋದರೆ ಪ್ರಧಾನಿ ಮೋದಿ ಹಿಡಿಯುತ್ತಾರೆ. ಹಾಗಾಗಿ ಸುರಂಗ ಮಾರ್ಗ ಮಾಡಿ ದಿಲ್ಲಿಗೆ ಸಾಗಿಸಲಿ,” ಎಂದು ಆರ್.ಅಶೋಕ್ ವ್ಯಂಗ್ಯವಾಡಿದರು.
ಸಿಎಂ ಅವರು ರಾಜ್ಯದ ಜನತೆಗೆ ಧನ್ಯವಾದ ತಿಳಿಸಿದ್ದು, ಅವರು ಕಾಂಗ್ರೆಸ್ ಸರಕಾರದ ಅವಧಿ ಮುಗಿಯಿತೆಂಬ ಕಾರಣಕ್ಕೆ ಧನ್ಯವಾದ ಹೇಳಿದ್ದಾರೋ ಅಥವಾ ಕಾನೂನು ಸುವ್ಯವಸ್ಥೆ ಹಾಳು ಮಾಡಿರುವ ಕೊಲೆಗಾರರಿಗೆ ಧನ್ಯವಾದ ತಿಳಿಸಿದ್ದಾರೋ ಗೊತ್ತಿಲ್ಲ. ಒಂದು ವರ್ಷದಲ್ಲಿ ಮಗು ಕೂಡ ಅಂಬೆಗಾಲಿಡುತ್ತದೆ ಎಂದರು.
ಆದರೆ ಸರಕಾರ ಇನ್ನೂ ಟೇಕಾಫ್ ಆಗಿಲ್ಲ. ನೇಹಾ, ಅಂಜಲಿ ಕೊಲೆಯಾಗಿದ್ದು, ಮುಂದೆ ಯಾರ ಕೊಲೆ ಎಂಬ ಆತಂಕವಿದೆ. ಹೆಣ್ಣು ಮಕ್ಕಳು ಕಾಲೇಜಿಗೆ ಹೋದರೆ ವಾಪಸ್ಸಾಗುವ ಗ್ಯಾರಂಟಿ ಇಲ್ಲ. ಅಂಜಲಿಯ ಕೊಲೆಯಲ್ಲಿ ಪೊಲೀಸರ ಲೋಪವಿದೆ ಎಂದು ಗೃಹ ಸಚಿವರೇ ಒಪ್ಪಿಕೊಂಡಿದ್ದು, ಸರಕಾರ ಏಕೆ ಇರಬೇಕು,” ಎಂದು ಹೇಳಿದರು.