ಬೆಂಗಳೂರು:ದಂಪತಿಯ ಒಂದು ಪೋಟೋ ಆಧಾರವಾಗಿಟ್ಟುಕೊಂಡು ಅವರು ಅನ್ಯೋನ್ಯತೆಯಿಂದ ಇದ್ದಾರೆಂದು ನಿರ್ಧರಿಸಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
‘ದಂಪತಿ ವಿವಾಹವೊಂದರಲ್ಲಿ ಭಾಗಿಯಾಗಿ ಸಂತೋಷದಿಂದ ಛಾಯಾಚಿತ್ರಕ್ಕೆ ಪೋಸು ನೀಡಿದ್ದಾರೆ.
ಅದರ, ಆಧಾರದ ಮೇಲೆ ದಂಪತಿ ನಡುವೆ ಎಲ್ಲವೂ ಸರಿಯಾಗಿದೆ ಎಂದರ್ಥವಲ್ಲ. ಅದೇ ಆಧಾರದಲ್ಲಿ ಇಬ್ಬರ ನಡುವಿನ ಸಂಬಂಧದ ಕುರಿತು ಸ್ಪಷ್ಟ ಚಿತ್ರಣ ನೀಡಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.
‘ಪತ್ನಿಯ ವಿರುದ್ಧ ಅಕ್ರಮ ಸಂಬಂಧವಿದೆ ಎಂದು ಪತಿ ಆರೋಪಿಸಿದ್ದಾರೆ. ಆ ಸಂಬಂಧ ಸಾಕ್ಷ್ಯಾಧಾರಗಳನ್ನು ಒದಗಿಸಲು ವಿಫಲರಾಗಿದ್ದಾರೆ. ಆದ್ದರಿಂದ ಈ ರೀತಿಯ ಆರೋಪ ಮಾಡುವುದು ಕ್ರೌರ್ಯಕ್ಕೆ ಸಮನಾದುದು ’ ಎಂದು ಪೀಠ ಅಭಿಪ್ರಾಯಪಟ್ಟಿದೆ.
2008 ರಿಂದ ಪರಿಚಯವಿದ್ದ ಅರ್ಜಿದಾರರು (ಪತ್ನಿ) ಮತ್ತು ಪ್ರತಿವಾದಿಗಳು (ಪತಿ) 2012 ರಲ್ಲಿ ವಿವಾಹವಾಗಿದ್ದರು. ಬಳಿಕ ಪತ್ನಿ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದರು. ಆದಾದ ಎರಡು ವರ್ಷಗಳ ಕಾಲ ಜತೆಗಿದ್ದರು. ನಂತರ ಪತಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ವಿಚ್ಛೇದನ ಅರ್ಜಿ ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ತುಮಕೂರಿನ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯಪೀಠ, ವಿಚ್ಛೇದನ ಮಂಜೂರು ಮಾಡಿದೆ.