ಕೋಲ್ಕತಾ: ಬಹು ಶಕ್ತಿಶಾಲಿಯಾದ ರೀಮಲ್ ಚಂಡಮಾರುತವು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿಗಳ ನಡುವೆ ಗಂಟೆಗೆ 135 ಕಿಮೀ ವೇಗದ ಗಾಳಿಯೊಂದಿಗೆ ಅಪ್ಪಳಿಸಿದೆ. ಭಾರಿ ಪ್ರಮಾಣದ ಮಳೆ, ಹಾಗೂ ವಿಪರೀತ ರಭಸದ ಗಾಳಿಯಿಂದಾಗಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಭಾನುವಾರ ರಾತ್ರಿ 8.30ರ ಸುಮಾರಿಗೆ ಸಾಗರ್ ದ್ವೀಪ ಮತ್ತು ಬಾಂಗ್ಲಾದೇಶದ ಮೋಂಗ್ಲಾದ ನೈಋತ್ಯ ಭಾಗದ ಸಮೀಪದ ಖೇಪುಪರ ನಡುವೆ ಬಿರುಗಾಳಿ ಸಹಿತ ಮಳೆ ಅಪ್ಪಳಿಸಿದೆ.
ಚಂಡಮಾರುತ ಅಪ್ಪಳಿಸುವುದಕ್ಕೂ ಮುನ್ನ ಬಂಗಾಳ ಹಾಗೂ ಉತ್ತರದ ರಾಜ್ಯಗಳ ವಿಪತ್ತು ನಿರ್ವಹಣಾ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ಹೈ ಅಲರ್ಟ್ ಘೋಷಿಸಿದ್ದವು. ಇದರ ಹಾನಿಯನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಸ್ಸಾಂ, ತ್ರಿಪುರಾ, ಮೇಘಾಲಯ ಮತ್ತು ಮಿಜೋರಾಂ ರಾಜ್ಯಗಳಲ್ಲಿನ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿತ್ತು.
ಇದರಿಂದ ಧಾರಾಕಾರ ಮಳೆ ಸುರಿದಿದ್ದು, ಕೆಳಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಕೃಷಿ ಭೂಮಿಗಳು ಸಹ ಜಲಾವೃತಗೊಂಡಿದ್ದು, ವ್ಯಾಪಕ ನಷ್ಟ ಮತ್ತು ಹಾನಿ ಉಂಟಾಗಿದೆ.
ರೀಮಲ್ ಚಂಡಮಾರುತದಿಂದಾಗಿ ಕೋಲ್ಕತಾ ಹಾಗೂ ದಕ್ಷಿಣ ಬಂಗಾಳದ ವಾಯು, ರೈಲು ಮತ್ತು ರಸ್ತೆ ಸಾರಿಗೆ ವ್ಯವಸ್ಥೆಗಳು ಅಸ್ತವ್ಯಸ್ತಗೊಂಡಿವೆ. ಪೂರ್ವ ಹಾಗೂ ದಕ್ಷಿಣ ರೈಲ್ವೆ ಅನೇಕ ರೈಲುಗಳ ಸಂಚಾರವನ್ನು ರದ್ದುಗೊಳಿಸಿವೆ. ಕೋಲ್ಕತಾದಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 21 ಗಂಟೆಗಳ ಕಾಲ ವಿಮಾನ ಹಾರಾಟವನ್ನು ಅಮಾನತುಗೊಳಿಸಿದ್ದು, ಇದರಿಂದ 394 ವಿಮಾನಗಳ ಸಂಚಾರ ವ್ಯತ್ಯಯಗೊಂಡಿದೆ. ಬೆಳಿಗ್ಗೆ 9 ಗಂಟೆಗೆ ಕಾರ್ಯಾಚರಣೆ ಮರು ಆರಂಭಿಸುವುದಾಗಿ ವಿಮಾನ ನಿಲ್ದಾಣವು ಭಾನುವಾರ ತಿಳಿಸಿತ್ತು. ಕೋಲ್ಕತಾದ ಶ್ಯಾಮ್ ಪ್ರಸಾದ್ ಮುಖರ್ಜಿ ಬಂದರು ಕೂಡ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.
ಸೋಮವಾರ ಬೆಳಿಗ್ಗೆಯಿಂದ ಚಂಡಮಾರುತದ ಆರ್ಭಟ ಕೊಂಚ ತಣ್ಣಗಾಗಿದೆ. ಚಂಡಮಾರುತವು ಕ್ರಮೇಣವಾಗಿ ದುರ್ಬಲವಾಗುವ ಸಾಧ್ಯತೆ ಇದೆ. ಆದರೆ ಈಗಾಗಲೇ ಅದು ಪಶ್ಚಿಮ ಬಂಗಾಳದ ಕರಾವಳಿಯಾದ್ಯಂತ ವ್ಯಾಪಕ ಹಾನಿ ಸೃಷ್ಟಿಸಿದೆ.