ಬೆಂಗಳೂರು: ಬಿಬಿಎಂಪಿ ಶಾಲೆಗಳಲ್ಲಿ ತರಗತಿಗಳು ಶುರುವಾದ್ರೂ ಇನ್ನೂ ಶಿಕ್ಷಕರ ನೇಮಕಾತಿ ಅಗಿಲ್ಲ. ಸೆಕ್ಯುರಿಟಿ ಏಜೆನ್ಸಿ ಮೂಲಕ ಶಿಕ್ಷಕರ ನೇಮಕಕ್ಕೆ ವಿರೋಧ ಬಂದ ಬಳಿಕ ಟೆಂಡರ್ ರದ್ದುಮಾಡಿರೋ ಪಾಲಿಕೆ, ಇದೀಗ SDMC ಮೂಲಕ ಶಿಕ್ಷಕರ ನೇಮಕಕ್ಕೆ ಮುಂದಾಗಿದೆ.
ರಾಜ್ಯ ಸರ್ಕಾರದ ಯಡವಟ್ಟಿಗೆ ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ಶಿಕ್ಷಣ ಸಿಗದೆ ಪರದಾಡೋ ಪರಿಸ್ಥಿತಿ ಎದುರಾಗಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ಬಿಬಿಎಂಪಿ ಶಾಲಾ ಶಿಕ್ಷಕರ ನೇಮಕ್ಕೆ ಸೆಕ್ಯುರಿಟಿ ಏಜೆನ್ಸಿಗೆ ಜವಾಬ್ದಾರಿ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದಾದ ಬಳಿಕ ಟೆಂಡರ್ ರದ್ದು ಮಾಡಿದ್ರೂ ಸದ್ಯ ಇನ್ನೂ ಶಿಕ್ಷಕರ ನೇಮಕವಾಗಿಲ್ಲ. ಇತ್ತ ತರಗತಿಗಳು ಶುರುವಾದ್ರೂ ಶಿಕ್ಷಕರ ನೇಮಕವಾಗದೇ ಇರೋದು ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರ್ತಿದೆ ಅನ್ನೋ ಆರೋಪ ಕೇಳಿಬರ್ತಿದೆ.
ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಮಕ್ಕಳಿಗೆ ಪಾಠ ಮಾಡೋದಕ್ಕೆ ಅಂತಾ ಪಾಲಿಕೆಯಲ್ಲಿ 150 ಕಾಯಂ ಶಿಕ್ಷಕರು ಮಾತ್ರ ಇದ್ದಾರೆ, ಉಳಿದ 700ಕ್ಕೂ ಹೆಚ್ಚು ಗುತ್ತಿಗೆ ಶಿಕ್ಷಕರು ಗುತ್ತಿಗೆ ಅಧಾರದ ಮೇಲೆ ಸೇವೆ ನೀಡ್ತಿದ್ರು, ಅದ್ರೆ ಗುತ್ತಿಗೆ ರದ್ದಾಗಿರೋದರಿಂದ ಶಿಕ್ಷಕರ ಕೊರತೆ ಎದುರಾಗಿದೆ.
ಇತ್ತ ಏಜೆನ್ಸಿ ರದ್ದು ಮಾಡಿದ ಬಳಿಕ SDMC ಮೂಲಕ ಶಿಕ್ಷಕರನ್ನ ನೇಮಿಸೋಕೆ ಸರ್ಕಾರ ಸಮಿತಿ ರಚನೆ ಮಾಡಿದೆ, ಈ ಸಮಿತಿ ಎಲ್ಲವನ್ನ ಪರಿಶೀಲಿಸಿ ಜೂನ್ 10ರೊಳಗೆ ಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನ ನೇಮಿಸಬೇಕಿದೆ, ಆದ್ರೆ ಈಗಾಗಲೇ ತರಗತಿಗಳು ಶುರುವಾಗಿದ್ದು, ಶಿಕ್ಷಕರ ನೇಮಕ ಆಗೋ ತನಕ ಮಕ್ಕಳು ಪಾಠ-ಪ್ರವಚನವಿಲ್ಲದೇ ಕಾಯೋ ಅನಿವಾರ್ಯತೆ ಎದುರಾಗಿದ್ದು, ಇದೆಲ್ಲದರ ಮಧ್ಯೆ ಮಕ್ಕಳು ಪಾಠ ಕೇಳೋಕೆ ಶಾಲೆಗೆ ಬಂದ್ರೂ ಪಾಠ ಮಾಡೋದಕ್ಕೆ ಶಿಕ್ಷಕರ ಕೊರತೆ ಇರೋದರಿಂದ ಪಾಠ-ಪ್ರವಚನಕ್ಕೆ ಅಡ್ಡಿಯಾಗ್ತಿದೆ ಅನ್ನೋ ಆರೋಪ ಕೇಳಿಬರ್ತಿದೆ.