ಬೆಂಗಳೂರು: ವಿಧಾನಸಭೆ ಬಳಿಕ, ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಟಿಕೆಟ್ ವಂಚಿತರಾಗಿ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಕಾರಣಕ್ಕೆ ಪಕ್ಷದಿಂದ ಉಚ್ಚಾಟನೆಗೊಂಡಿರುವ ಬಿಜೆಪಿ ಹಿರಿಯ ನಾಯಕರ ರಘುಪತಿ ಭಟ್ ಅವರ ಪರವಾಗಿ ಮೈಸೂರು- ಕೊಡುಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಧ್ವನಿ ಎತ್ತಿದ್ದಾರೆ. ಪ್ರಸ್ತುತದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿರುವ ಪ್ರತಾಪ್ ಸಿಂಹ, ಸಮಾನದುಃಖಿಯ ಪರ ಬೆಂಬಲಕ್ಕೆ ನಿಂತಿರುವುದು ಕುತೂಹಲ ಮೂಡಿಸಿದೆ.
“ಉಡುಪಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಮವಸ್ತ್ರ ಸಂಹಿತೆಯನ್ನು ಮುರಿದು ಬುರ್ಖಾ ಧರಿಸಿ ಕ್ಲಾಸಿಗೆ ಬಂದ ಜಿಹಾದಿ ಮನಸ್ಥಿತಿಯ ವಿರುದ್ಧ ಹೋರಾಡಿದ ರಘುಪತಿ ಭಟ್ಟರಿಗೆ MLA ಟಿಕೆಟ್ಟೂ ಸಿಗಲಿಲ್ಲ, MLC ಟಿಕೆಟ್ಟನ್ನೂ ಕೊಡಲಿಲ್ಲ. ಸಾಲದೆಂಬಂತೆ ಪಕ್ಷದಿಂದಲೂ ಉಚ್ಛಾಟನೆಗೆ ಒಳಗಾಗಿ ಬುರ್ಖಾ ಸ್ಟೂಡೆಂಟ್ ಅಲಿಯಾ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ” ಎಂದು ಪ್ರತಾಪ್ ಸಿಂಹ ಹೇಳಿದರು.
“ಪ್ರತಾಪ್ ಸಿಂಹ ಅವರಿಗೆ ವಂದನೆಗಳು. ನಿಜವಾದ ಬಿಜೆಪಿ ನಾಯಕರಿಗೆ, ಕಾರ್ಯಕರ್ತರಿಗೆ ಮತ್ತು ಹಿಂದುತ್ವವಾದಿಗಳಿಗೆ ನನ್ನ ನಿಲುವು ಏನೆಂದು ಸ್ಪಷ್ಟವಾಗಿ ತಿಳಿದೆ. ಪರಿವಾರದ ಮನಸ್ಥಿತಿಯ ನಿಷ್ಠಾವಂತ ಕಾರ್ಯಕರ್ತರು ಎಂದಿಗೂ ನನ್ನ ಜೊತೆ ಇದ್ದಾರೆ. ನನ್ನ ಉಸಿರು ಇರುವವರೆಗೆ ಅವರ ಧ್ವನಿಯಾಗಿ ಇರುತ್ತೇನೆ” ಎಂದು ತಿಳಿಸಿದರು.
ಹಿಜಾಬ್ ವಿಚಾರವಾಗಿ ಉಂಟಾಗಿದ್ದ ವಿವಾದವನ್ನು ಪ್ರಸ್ತಾಪಿಸಿದ್ದ ಉಡುಪಿಯ ವಿದ್ಯಾರ್ಥಿನಿ ಅಲಿಯಾ ಅಸ್ಸಾದಿ, ಉಚ್ಚಾಟನೆಗೊಂಡಿರುವ ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಟೀಕಿಸಿರುವ ಸಂಗತಿ, ಹಿಂದುತ್ವವಾದಿಗಳಿಗೆ ಬಂದಿರುವ ದುರದೃಷ್ಟಕರ ಪರಿಸ್ಥಿತಿ ಎಂದು ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ಮೂಲ ಕಾರ್ಯಸೂಚಿಯಾದ ಹಿಂದುತ್ವದ ಪರ ಹೋರಾಡಿದವರ ಪರವಾಗಿ ಪಕ್ಷ ನಿಲ್ಲುವುದಿಲ್ಲ ಎಂಬ ಕಾರ್ಯಕರ್ತರ ಆರೋಪಗಳನ್ನು ಪ್ರತಾಪ್ ಸಿಂಹ ಪ್ರತಿಧ್ವನಿಸಿದ್ದಾರೆ. ಅದೇ ವೇಳೆ ರಘುಪತಿ ಭಟ್ ಅವರಿಗೆ ಎಂಎಲ್‌ಎ ಹಾಗೂ ಎಂಎಲ್‌ಸಿ ಟಿಕೆಟ್ ಕೂಡ ಸಿಗದೆ ಇರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದರು.