ಬಾಗಲಕೋಟೆ
ಕನ್ನಡ ಸಮ್ಮೇಳನ, ಕನ್ನಡ ಎಂದರೇನು ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಸಮ್ಮೇಳನಕ್ಕೆ ಹಾಜರಾಗುವುದಕ್ಕೆ ಇಲಾಖೆ ಕನ್ನಡಿಗರಿಗೆ ರಜೆ ನೀಡಿದ್ದರೆ ಎಷ್ಟು ಜನ ಸಮ್ಮೇಳನಕ್ಕೆ ಹಾಜರಾಗಿದ್ದೀರಿ ಎಂಬುದನ್ನು ಅರಿತುಕೊಳ್ಳಬೇಕು ಎಂದು ಬವಿವ ಸಂಘದ ಆಡಳಿತಾಕಾರಿ, ಸಾಹಿತಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಹೇಳಿದರು.
ನಗರದ ನವನಗರದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಳೆದೆರಡು ದಿನದಿಂದ ನಡೆದ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕನ್ನಡ ಎಂದರೆ ಜನಾಂಗ, ಭಾಷೆ, ತಾಯಿನುಡಿ ಅದನ್ನು ಕಳೆದುಕೊಂಡರೆ ಬದುಕು ಏನಾಗಬಹುದು ಎಂಬುದನ್ನು ಅರಿಯಬೇಕು. ಇಂತಹ ಸಮ್ಮೇಳನಗಳಿಗೆ ಹಾಜರಾಗಲು ಇಲಾಖೆ ರಜೆ ನೀಡಿದ್ದರೂ ಎಷ್ಟು ಜನ ಕನ್ನಡಿಗರು ಹಾಜರಾಗಿದ್ದೀರಿ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು ಎಂದರು.
ಕಳೆದ 25 ವರ್ಷಗಳಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದು 100 ವಿದ್ಯಾರ್ಥಿಗಳು ಪಿಯುಸಿಗೆ ದಾಖಲಾಗಿದ್ದರೆ ಅವರಲ್ಲಿ 80 ವಿದ್ಯಾರ್ಥಿಗಳಿಗೆ ಕನ್ನಡವೇ ಬರುವುದಿಲ್ಲ. ಇದರ ಜವಾಬ್ದಾರಿ ಹೊರುವವರಾರು?. ಕನ್ನಡ ಉಳಿಸುವುದೆಂದರೆ ಕನ್ನಡ ಶಿಕ್ಷಕರನ್ನು ಉಳಿಸುವುದಲ್ಲ. ಕರ್ನಾಟಕ ನಮ್ಮ ಬದುಕು, ಜೀವನ, ಸಾಂಸ್ಕೃತಿಕ ವ್ಯವಸ್ಥೆ, ಆಹಾರ, ರೂಪರೇಷೆ ಆಗಬೇಕು. ನಿಮ್ಮ ಮಕ್ಕಳು ಕನ್ನಡ ಕಲಿಯದೇ ಹೋದರೆ ಮುಂದಿನ 50 ವರ್ಷದ ನಂತರ ನಮ್ಮ ರಾಜ್ಯವನ್ನು ಅನ್ಯ ಭಾಷಿಕರು ಆಳುವಂತಾಗುತ್ತದೆ. ಭಾರತ ಬಹು ಧರ್ಮ, ಭಾಷೆ ಇರುವ ದೇಶವಾಗಿದ್ದರೂ ಸಾವಿರಾರು ವರ್ಷಗಳ ಕಾಲ ಬೇರೆಯವರೊಂದಿಗೆ ಬದುಕು ಸಾಗಿಸಿದ್ದೇವೆ. ಇದೀಗ ನಾವು ನಮ್ಮೊಂದಿಗೆ ಬದುಕು ಸಾಗಿಸಬೇಕಿದೆ. ಅವರ ಮಕ್ಕಳು ಇಂಗ್ಲೀಷ್ ಕಲಿಯುತ್ತಾರೆ. ಇವರ ಮಕ್ಕಳು ಹೀಗಿದ್ದಾರೆ ಎನ್ನುವುದು ಹಾಸ್ಯಾಸ್ಪದ. ನಮ್ಮ ಮನೆ ಭಾಷೆ, ಜಾತಿ ಬೇರೆ ಇದ್ದರೂ ನಾವೆಲ್ಲ ಕನ್ನಡಿಗರಾಗಿರಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಾನಾ ಕ್ಷೇತ್ರದಲ್ಲಿ ಸಾಧಕರಿಗೆ ಜಿಲ್ಲಾ ಕನ್ನಡಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿದ್ದರು. ಸರ್ವಾಧ್ಯಕ್ಷ ತಾತಾಸಾಹೇಬ ಬಾಂಗಿ, ಡಾ.ಚಂದ್ರಶೇಖರ ಕಾಳನ್ನವರ, ಡಾ.ಸಿ.ಎಂ.ಜೋಶಿ, ಪಾಂಡುರAಗ ಸಣ್ಣಪ್ಪನವರ, ಮಲ್ಲಿಕಾರ್ಜುನ ಸಜ್ಜನ ಸೇರಿದಂತೆ ಕಸಾಪ ಜಿಲ್ಲಾ, ತಾಲೂಕು, ಹೋಬಳಿ ವ್ಯಾಪ್ತಿಯ ಪದಾಕಾರಿಗಳು ಇದ್ದರು.