ನಾಗರ ಪಂಚಮಿ ಹಬ್ಬದಿಂದ ಸಾಲು ಸಾಲು ಹಬ್ಬಗಳದ್ದೇ ಸಂಭ್ರಮವು ಆರಂಭವಾಗುತ್ತದೆ. ಈ ಹಬ್ಬಗಳಂದು ಮಾಡುವ ಅಡುಗೆಯೂ ಬಹಳ ವಿಶೇಷವಾಗಿದೆ. ಈ ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ಹಬ್ಬಕ್ಕೆ ಅಳ್ಳಿಟ್ಟು ಬಹಳ ಜನಪ್ರಿಯ. ಈ ರೆಸಿಪಿಯೂ ಇಲ್ಲದೇ ನಾಗರಪಂಚಮಿ ಹಬ್ಬವು ಪೂರ್ಣವಾಗುವುದೇ ಇಲ್ಲ. ಹಾಗಾದ್ರೆ ಈ ರೆಸಿಪಿಯನ್ನು ಮಾಡೋದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Naga Panchami 2024: ನಾಗರ ಪಂಚಮಿಗೆ ಉತ್ತರ ಕರ್ನಾಟಕ ಸಾಂಪ್ರದಾಯಿಕ ಸಿಹಿ ತಿನಿಸು ಅಳ್ಳಿಟ್ಟು ಉಂಡೆ, ಮಾಡೋದು ಹೇಗೆ?
ಶ್ರಾವಣ ಮಾಸ ಆರಂಭವಾಗುತ್ತಿದಂತೆ ಕರ್ನಾಟಕದಲ್ಲಿ ಹಬ್ಬಗಳ ಸಂಭ್ರಮವು ಮನೆ ಮಾಡುತ್ತದೆ. ಒಂದರ ಹಿಂದೆ ಒಂದರಂತೆ ಹಬ್ಬಗಳದ್ದೇ ಸಾಲು. ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಬಾರಿ ನಾಗರ ಪಂಚಮಿ ಹಬ್ಬವನ್ನು ಆಗಸ್ಟ್ 9 ರಂದು ಆಚರಿಸಲಾಗುತ್ತಿದೆ. ಈ ದಿನದಂದು ಸಾಂಪ್ರದಾಯಿಕ ತಿಂಡಿ ತಿನಿಸುಗಳಾದ ಕಡುಬು,ಲಡ್ಡು, ಪಂಚಕಜ್ಜಾಯ ಹೀಗೆ ಅನೇಕ ಬಗೆಯ ಅಡುಗೆಯನ್ನು ಮಾಡಿ ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಅದರಲ್ಲಿಯೂ ಉತ್ತರ ಕರ್ನಾಟಕದ ಭಾಗದಲ್ಲಿ ಅಳ್ಳಿಟ್ಟು ಉಂಡೆ ಸಿಕ್ಕಾಪಟ್ಟೆ ಜನಪ್ರಿಯವಾಗಿದ್ದು, ಮಾಡಲು ಸುಲಭ ಮಾತ್ರವಲ್ಲ ರುಚಿಕರವು ಆಗಿದೆ.
ಅಳ್ಳಿಟ್ಟು ಮಾಡಲು ಬೇಕಾಗುವ ಸಾಮಗ್ರಿಗಳು
* ಒಂದು ಕಪ್ ಜೋಳದ ಅರಳು
* ಒಂದು ಕಪ್ ಗೋದಿ ಹಿಟ್ಟು
* ಒಂದು ಕಪ್ ಬೆಲ್ಲದ ಪುಡಿ
* ಮೂರ್ನಾಲ್ಕು ಚಮಚ ತುಪ್ಪ
* ಒಂದು ಚಮಚ ಅಕ್ಕಿ
* ಅರ್ಧ ಚಮಚ ಗಸಗಸೆ
* ಏಲಕ್ಕಿ
* ಲವಂಗ
* ಜಾಯಿಕಾಯಿ ಪುಡಿ
* ನೀರು
ಅಳ್ಳಿಟ್ಟು ಮಾಡುವ ವಿಧಾನ
* ಮೊದಲಿಗೆ ಒಂದು ಚಮಚದಷ್ಟು ಅಕ್ಕಿಯನ್ನು ಹುರಿದುಕೊಂಡು ತಣ್ಣಗಾಗಲು ಬಿಡಿ.
* ಆ ಬಳಿಕ ಜೋಳದ ಅರಳು, ಹುರಿದಿಟ್ಟ ಅಕ್ಕಿ ಸೇರಿಸಿ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿ.
* ಈ ಮಿಶ್ರಣಕ್ಕೆ ಗೋಧಿ ಹಿಟ್ಟು, ತುಪ್ಪ ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ.
* ಇನ್ನೊಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದಕ್ಕೆ ಪುಡಿ ಮಾಡಿದ ಬೆಲ್ಲ ಹಾಕಿ ಚೆನ್ನಾಗಿ ಕರಗಿಸಿ.
* ಈಗಾಗಲೇ ಪುಡಿ ಮಾಡಿದ ಹುರಿದ ಅರಳು, ಗೋಧಿ ಹಾಗೂ ಅಕ್ಕಿ ಹಿಟ್ಟಿನ ಮಿಶ್ರಣ ಹಾಕಿ ಕೈಯಾಡಸುತ್ತ ಇರಿ. ತಳ ಬಿಡುತ್ತಿದ್ದಂತೆ ಸ್ಟೌವ್ ಆಫ್ ಮಾಡಿ.
* ಇನ್ನೊಂದು ಕಡೆ ಏಲಕ್ಕಿ, ಲವಂಗ ಮತ್ತು ಗಸಗಸೆ, ಜಾಯಿಕಾಯಿ ಎಲ್ಲ ಸೇರಿಸಿ ಪುಡಿ ಮಾಡಿಕೊಳ್ಳಿ.
* ಈ ಮಿಶ್ರಣಕ್ಕೆ ಈ ಪುಡಿ ಮಾಡಿರುವುದನ್ನು ಸೇರಿಸಿ ಕೈಗೆ ತುಪ್ಪ ಸವರಿಕೊಂಡು ಉಂಡೆಗಳಾಗಿ ಕಟ್ಟಿದರೆ ಸಿಹಿಯಾದ ಅಳ್ಳಿಟ್ಟು ಸವಿಯಲು ಸಿದ್ಧ.