ಬಾಗಲಕೋಟೆ:
ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಮೂಡಾ, ವಾಲ್ಮೀಕಿ ಹಗರಣಗಳಿಗಿಂತಲೂ ಬಹುದೊಡ್ಡ ಹಗರಣ ಗಳಿಂದಾಗಿ ಜಿಲ್ಲಾಡಳಿತ ಗಬ್ಬೆದ್ದು ನಾರುತ್ತಿವೆ.
ಇದುವರೆಗೂ ಪ್ರವಾಸೋದ್ಯಮ, ಗಣಿ ಇಲಾಖೆ, ಗ್ರಾಮೀಣ ಕುಡಿವ ನೀರು ಸರಬರಾಜು ಸೇರಿದಂತೆ ನಾನಾ ಇಲಾಖೆಗಳಲ್ಲಿನ ಭಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಯ ಅವ್ಯವಹಾರಗಳು ಸಾಕಷ್ಟು ಸದ್ದು ಮಾಡುತ್ತಿವೆ.
ಜಿಲ್ಲೆಯ ನಾನಾ ಇಲಾಖೆಗಳಲ್ಲಿನ ಅವ್ಯವಹಾರಗಳಿಗೆ ಕಾರಣರಾದ ಕೆಲ ಅಧಿಕಾರಿಗಳಿಗೆ ಜಿಲ್ಲಾಡಳಿತದಿಂದ ಬರೀ ನೋಟಿಸ್ ನೀಡುವ ಕೆಲಸ ಮಾತ್ರ ಆಗಿದೆ. ಅದಾದ ಬಳಿಕ ಮುಂದಿನ ಕ್ರಮಗಳು ಜರುಗಿಲ್ಲ. ನಿರ್ಮಿತಿ ಕೇಂದ್ರದ ಅಧಿಕಾರಿ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಂಡು ಅವರನ್ನು ಕೆಲಸದಿಂದ ಬಿಡುಗಡೆಗೊಳಿಸಿತ್ತು ಆದರೆ ಅವರು ನ್ಯಾಯಲಯದ ಮೋರೆ ಹೋಗಿ, ಕೆಲಸಕ್ಕೆ ವಾಪಸ್ಸಾಗಿದ್ದಾರೆ. ಅಂದ ಹಾಗೆ ಪ್ರವಾಸೋದ್ಯಮ ಇಲಾಖೆಯಲ್ಲಿ ತನಿಖೆ ತೀವ್ರಗೊಂಡಿದ್ದು, ಪೊಲೀಸರು ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಏತನ್ಮಧ್ಯೆ ಇದೀಗ ನಿಯಮ ಉಲ್ಲಂಘಿಸಿ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ನಿವೇಶನಗಳನ್ನು ಹಂಚಿಕೆ ಮಾಡಿರುವ ಪ್ರಕರಣ ಬಿಟಿಡಿಎದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಮುಳುಗಡೆ ಸಂತ್ರಸ್ತರ ಪಾಲಿನ ಕಾಮಧೇನು ಆಗಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿನ ನಿಯಮ ಬಾಹಿರ ನಿವೇಶನ ಹಂಚಿಕೆ ಕೃತ್ಯ ಬಯಲಿಗೆ ಬಂದಿದೆ.
ಒಟ್ಟು 04 ಪ್ರಕರಣಗಳಲ್ಲಿ ನಿಯಮಬಾಹಿರವಾಗಿ ಹಂಚಿಕೆಯಾಗಿರುವ ನಿವೇಶನಗಳ ಹಂಚಿಕೆಯನ್ನು ಕೂಡಲೇ ರದ್ದುಗೊಳಿಸಲು ಹಾಗೂ ಹಂಚಿಕೆಯಾದ ನಿವೇಶನಗಳು ಅವರವರ ಹೆಸರಿಗೆ ನೋಂದಣಿಯಾಗಿದ್ದಲ್ಲಿ ಸದರಿ ನೋಂದಣಿಯನ್ನು ರದ್ದುಪಡಿಸಲು ಕೂಡಲೇ ಕ್ರಮ ಕೈಗೊಂಡು ನಿವೇಶನಗಳನ್ನು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪಾಧಿಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಲು ನಿಯಮಾನುಸಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ
ಜಲಸಂಪನ್ಮೂಲ ಇಲಾಖೆಯ ಅಧೀನ ಕಾರ್ಯದರ್ಶಿಗಳು ನಿರ್ದೇಶನ ನೀಡಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವರು ನಿಯಮ ಉಲ್ಲಂಘನೆ ಮಾಡಿ ನಿವೇಶನ ಹಂಚಿಕೆ ಮಾಡಿರುವ ಕುರಿತಂತೆ 11/12/2023 ರಂದು ಸರ್ಕಾರಕ್ಕೆ ಸಲ್ಲಿಸಿದ ದೂರಿನ ಬಗೆಗೆ ವಿಚಾರಣೆ ನಡೆದ ಪರಿಣಾಮ ಸಾವಿರಾರು ಕೋಟಿ ರೂ. ಬೆಲೆ ಬಾಳುವ ಆಸ್ತಿ ಬಿಟಿಡಿಎಗೆ ವಾಪಸ್ ತೆಗೆದುಕೊಳ್ಳಲು ಕ್ರಮ ಕೈಗೊಳ್ಳುವಂತೆ ಜಲಸಂಪನ್ಮೂಲ ಇಲಾಖೆ ಮುಂದಾಗಿದೆ.
ಕಾನೂನು ಬಾಹಿರವಾಗಿ ನಿವೇಶನ ಹಂಚಿಕೆ ಜತೆಗೆ ಬಿಟಿಡಿಎದಲ್ಲಿ ಅಭಿವೃದ್ಧಿ ಹೆಸರಲ್ಲೂ ಸಾವಿರಾರು ಕೋಟಿ ರೂಪಾಯಿಗಳ ವಂಚನೆ ಕೂಡಾ ನಡೆದಿದೆ. ಈ ಬಗೆಗೆ ಸಮಗ್ರ ತನಿಖೆ ನಡೆದಾಗ ಎಲ್ಲವೂ ಬಯಲಾಗಲಿದೆ ಎನ್ನುವ ಮಾತುಗಳು ಮುಳುಗಡೆ ಸಂತ್ರಸ್ತರಿಂದಲೇ ಕೇಳಿ ಬರಲಾರಂಭಿಸಿವೆ.
– ವಿಠ್ಠಲ ಬಲಕುಂದಿ