ಹೊಸದಿಲ್ಲಿ: ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಅಧಿಕ ತೂಕದ ಕಾರಣ ಮಹಿಳೆಯರ ಫ್ರೀ ಸ್ಟೈಲ್ 50 ಕೆಜಿ ಕುಸ್ತಿ ಸ್ಪರ್ಧೆಯ ಚಿನ್ನದ ಪದಕದ ಪಂದ್ಯಕ್ಕೂ ಅನರ್ಹಗೊಂಡಿದ್ದು, ಅವರ ಕನಸು ಭಗ್ನಗೊಳಿಸಿದೆ.
ವಿನೇಶ್ ಫೋಗಟ್ ಅವರು ತಮ್ಮ ವಿಭಾಗದ 50ಕೆಜಿಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕೆ ಅನರ್ಹಗೊಳಿಸಲಾಗಿದೆ. ಇದರೊಂದಿಗೆ ಭಾರತಕ್ಕೆ ಚಿನ್ನದ ಕನಸೊಂದು ನುಚ್ಚು ನೂರು ಮಾಡಿದೆ.
ಆದರೆ, ಆ 100 ಗ್ರಾಂ ತೂಕ ಇಳಿಸಲು ವಿನೇಶ್ ಅವರು ರಾತ್ರಿಯೆಲ್ಲಾ ಪ್ರಯತ್ನಿಸಿದ್ದರು. 2 ಕಿ.ಮೀ ಓಡಿದ್ದರು. ರಾತ್ರಿ ಜಾಗಿಂಗ್ ಮಾಡಿದ್ದರು. ಸ್ಕಿಪಿಂಗ್ ಮತ್ತು ಸೈಕ್ಲಿಂಗ್ ಕೂಡ ಮಾಡಿದ್ದರು. ಆದರೆ ಸಾಧ್ಯವಾಗಿಲ್ಲ.
ಇಡೀ ರಾತ್ರಿಯಲ್ಲಿ ಸಾಕಷ್ಟು ಪ್ರಯತ್ನ ಪಟ್ಟರೂ 100 ಗ್ರಾಂ ಇಳಿಸಲು ಸಾಧ್ಯವಾಗಲಿಲ್ಲ. ಆದರೆ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ನಲ್ಲಿ ತೂಕವನ್ನು ಯಶಸ್ವಿಯಾಗಿ ಕಾಯ್ದುಕೊಂಡಿದ್ದರು.
ವಿನೇಶ್ ಅನರ್ಹಗೊಂಡ ಬೆನ್ನಲ್ಲೇ ಫೈನಲ್ನ ಮತ್ತೊಬ್ಬ ಸ್ಪರ್ಧಿ ಅಮೆರಿಕದ ಸೆರಾ ಹಿಲ್ದಿಬ್ರೇಟ್ ಅವರನ್ನು ಚಿನ್ನದ ವಿಜೇತರೆಂದು ಘೋಷಿಸಲಾಗುತ್ತದೆ. ಆದರೆ, ಬೆಳ್ಳಿ ಪದಕಕ್ಕೆ ಯಾರೂ ಅರ್ಹರಾಗಿರುವುದಿಲ್ಲ.
ಈ ಬಾರಿ ಮಹಿಳೆಯರ 50 ಕೆಜಿ ಸ್ಪರ್ಧೆಯಲ್ಲಿ ಯಾವುದೇ ಬೆಳ್ಳಿ ಪದಕ ಇರುವುದಿಲ್ಲ. ಒಂದು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ನೀಡಲಾಗುತ್ತದೆ. ಒಂದು ಕಂಚು ತನ್ನ ಸೆಮಿ-ಫೈನಲ್ ಪಂದ್ಯದಲ್ಲಿ ಸೋತ ಕುಸ್ತಿಪಟುಗಳಲ್ಲಿ ಒಬ್ಬರಿಗೆ ನೀಡಲಾಗುವುದು. ಇನ್ನೊಂದು ರೆಪ್ಚೇಜ್ ಸುತ್ತಿನಲ್ಲಿ ಗೆದ್ದ ಕುಸ್ತಿಪಟುಗಳಿಗೆ ನೀಡಲಾಗುವುದು.
ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿ ಹಾಗೂ ತಮ್ಮ ಎಕ್ಸ್ ಖಾತೆ ಮೂಲಕ ವಿನೇಶಗೆ ಸಾಂತ್ವನ ಹೇಳಿದ್ದಾರೆ. ಮತ್ತೊಂದೆಡೆ ಅಸ್ವಸ್ಥಗೊಂಡ ವಿನೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ.