ಬಾಗಲಕೋಟೆ
ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ನಿಡಗುಂದಿ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ವೈ.ಎಸ್.ಬಂಡಿವಡ್ಡರ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ ಎಂದು ಬಾಗಲಕೋಟೆ ಮತಕ್ಷೇತ್ರದ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಎಸ್.ಎನ್.ರಾಂಪೂರ ತಿಳಿಸಿದರು.
ಪಟ್ಟಣದ ಎಸ್‌ಪಿಆರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಸುಲಭವಾಗಿ ಅಧಿಕಾರ ಗದ್ದುಗೆ ಹಿಡಿಯಬಹುದಾಗಿತ್ತು. ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಬೇರೆಯವರಿಗೆ ತಿಳಿಸುವುದು ಸೇರಿದಂತೆ ಹಲವು ವಿಷಯಗಳನ್ನು ಬಹಿರಂಗಗೊಳಿಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು ಕಂಡು ಬಂದಿತ್ತು. ಪಟ್ಟಣ ಪಂಚಾಯಿತಿಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ನೇರವಾಗಿ ಇವರಿಬ್ಬರು ಕಾರಣರಾಗಿದ್ದಾರೆ ಎಂದು ಹೇಳಿದರು.
ನಗರ ಘಟಕದ ಅಧ್ಯಕ್ಷ ಪೀರಾ ಖಾದ್ರಿ, ಕಾಂಗ್ರೆಸ್‌ನಿಂದ ಆಯ್ಕೆ ಆಗಿದ್ದರೂ ಪಕ್ಷದ ಸೂಚನೆಗೆ ಬೆಲೆ ನೀಡದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ವಿಪ್ ಜಾರಿ ಮಾಡಲಾಗಿದ್ದರೂ ಇಂತಹ ಘಟನೆ ನಡೆದಿದೆ. ಮುಂದಿನ ಕ್ರಮವನ್ನು ಪಕ್ಷದ ಮುಖಂಡರು ತೆಗೆದುಕೊಳ್ಳಲಿದ್ದಾರೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಸ್.ಚಳ್ಳಗಿಡದ, ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ಪಪಂ ಅಧ್ಯಕ್ಷರಾಗಲು ನಮ್ಮಲ್ಲೇ ಮೂವರು ಅಭ್ಯರ್ಥಿಗಳಿದ್ದರೂ ನಮ್ಮವರಿಂದಲೇ ಈ ಘಟನೆ ನಡೆದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು, ಗೆಲುವು ಸಹಜ ಎಂದು ಹೇಳಿದರು.