ಬಾಗಲಕೋಟೆ:
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಶಿಕ್ಷಕರ ಅದಾಲತ್ ಹಮ್ಮಿಕೊಂಡು ಶಿಕ್ಷಕರ ಸೇವಾ ಪುಸ್ತಕಗಳನ್ನು ಅಪ್ಡೇಟ್ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನೂತನ ಉಪನಿರ್ದೇಶಕ ಎಂ ವಿವೇಕಾನಂದ ಭರವಸೆ ನೀಡಿದರು.
ಅವರು ಕಚೇರಿಯಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ತಾಲೂಕು ಘಟಕಗಳ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶಿಕ್ಷಕರ ಗಳಿಕೆ ರಜೆಗಳು, ಕಾಲಮಿತಿ ವೇತನ ಬಡ್ತಿ, ಶಿಶುಪಾಲನಾ ರಜೆ, ವೈಯಕ್ತಿಕ ವಿವರ ಮೊದಲಾದ ಮಾಹಿತಿಯನ್ನು ಸಮರ್ಪಕವಾಗಿ ಸೇವಾ ಪುಸ್ತಕದಲ್ಲಿ ಸೇರಿಸಿ ಸ್ಥಳದಲ್ಲೇ ಅಂಗೀಕರಿಸಿ ಬಾಕಿ ಇರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ತಿಳಿಸಿದರು. ಶಿಕ್ಷಕರ ಹಿಂದಿನ ಮತ್ತು ಇಂದಿನ ಎಲ್ಲಾ ಪ್ರಕರಣಗಳನ್ನು ಸೂಕ್ತ ಪರಿಶೀಲನೆ ನಡೆಸಿ ಇತ್ಯರ್ಥ ಪಡಿಸಲಾಗುವುದು ಎಂದರು. ಗುಣಾತ್ಮಕ ಶಿಕ್ಷಣ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಸರ್ವರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ಬಾಗೇನವರ, ಪ್ರಧಾನ ಕಾರ್ಯದರ್ಶಿ ಜಿ ಎಲ್ ಮುಲ್ಲಾ, ಖಜಾಂಚಿ ಮುತ್ತು ಬೀಳಗಿ ಹುನಗುಂದ ತಾಲ್ಲೂಕ ಪ್ರಧಾನ ಕಾರ್ಯದರ್ಶಿ ಡಿ ಎಂ ಬಾಗವಾನ ನಿಕಟಪೂರ್ವ ಅಧ್ಯಕ್ಷ ಸಿದ್ದು ಶೀಲವಂತರ, ಬಾಗಲಕೋಟ ತಾಲೂಕಾ ಘಟಕದ ಕಾರ್ಯದರ್ಶಿ ಹುಚ್ಚೇಶ ಲಾಯದಗುಂದಿ ಮುಂತಾದವರು ಉಪಸ್ಥಿತರಿದ್ದರು.