ಇಂದು ಸಾಮಾನ್ಯಸಭೆ
ನಿಮ್ಮ ಸುದ್ದಿ ಬಾಗಲಕೋಟೆ
ಬಹು ವರ್ಷಗಳ ನಂತರ ಪಟ್ಟಣ ಪಂಚಾಯಿತಿಯಲ್ಲಿ ಸೆ.18 ರಂದು ಸಾಮಾನ್ಯ ಸಭೆ ನಡೆಯಲಿದ್ದು ಜನರ ನಿರೀಕ್ಷೆಗೆ ತಕ್ಕಂತೆ ಸಭೆ ನಡೆದು ಪಟ್ಟಣದ ಅಭಿವೃದ್ಧಿಗೆ ವೇಗ ದೊರೆಯಲಿದೆ ಎಂಬ ಭರವಸೆ ಮೂಡಿದೆ.
ಪಟ್ಟಣ ಪಂಚಾಯಿತಿಗೆ ನೂತನವಾಗಿ ಸದಸ್ಯರಾಗಿ ಆಯ್ಕೆ ಆಗಿದ್ದರೂ ಎರಡೂವರೆ ವರ್ಷದಿಂದ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ಘೋಷಣೆ ಆಗದೆ ಸದಸ್ಯರ ಅಧಿಕಾರಕ್ಕೆ ಕೊಕ್ಕೆ ಬಿದ್ದಿತ್ತು. ಎಲ್ಲ ಕೆಲಸಕ್ಕೂ ಆಡಳಿತಾಕಾರಿಯನ್ನೇ ಅವಲಂಬಿಸಬೇಕಿತ್ತು. ಎರಡೂವರೆ ವರ್ಷದಲ್ಲಿ ಆಡಳಿತಾಧಿಕಾರಿ ಕಚೇರಿಗೆ ಕಂಕುಳಲ್ಲಿ ಫೈಲ್ ಹಿಡಿದುಕೊಂಡು ಹೋಗುವ ಕಾರ್ಯ ಇಲ್ಲಿನ ಸಿಬ್ಬಂದಿಗಳದ್ದಾಗಿತ್ತು. ಒಂದೂ ಸಾಮಾನ್ಯ ಸಭೆ ನಡೆಸದಿರುವುದೇ ಆಡಳಿತಾಕಾರಿ ಸಾಧನೆ ಎಂಬ ದೂರೂ ಕೇಳಿ ಬಂದಿತ್ತು.
ಸದ್ಯ ಆಡಳಿತಾಕಾರಿ ಅಧಿಕಾರಕ್ಕೆ ಬ್ರೇಕ್ ಬಿದ್ದಿದ್ದು ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಮೂಲಕ ಆ.23 ರಿಂದ ಸದಸ್ಯರ ಆಡಳಿತ ಆರಂಭವಾಗಿದೆ. ಎರಡೂವರೆ ವರ್ಷದಿಂದ ನಮಗೆ ಅಧಿಕಾರವೇ ಇಲ್ಲ, ನಮ್ಮ ಮಾತು ಯಾರು ಕೇಳುವುದಿಲ್ಲ ಎಂಬ ಹಾರಿಕೆ ಉತ್ತರ ಕೊಡುತ್ತಿದ್ದ ಸದಸ್ಯರು ಇದೀಗ ಪಟ್ಟಣದ ಅಭಿವೃದ್ಧಿಯ ಮಂತ್ರಕ್ಕೆ ಮುಂದಾಗಬೇಕಿದೆ.
ಪ್ರಮುಖ ಸಮಸ್ಯೆಗಳು
ರಾಜ್ಯ ಹೆದ್ದಾರಿಯ ಅಕ್ಕಪಕ್ಕ ನಡೆಯುತ್ತಿರುವ ಸಂತೆ ಮಾರುಕಟ್ಟೆ ಸ್ಥಳಾಂತರ, ಕೆರೆ ಅಭಿವೃದ್ಧಿ, ಕೆರೆಗೆ ಹೋಗುವ ರಸ್ತೆ ನಿರ್ಮಾಣ, ಜ್ಞಾನಬಂಢಾರಕ್ಕೆ ಮೂಲ ಸೌಕರ್ಯ, ವಸತಿ ಯೋಜನೆ ಫಲಾನುಭವಿ ಆಯ್ಕೆ, ರಾಜ್ಯ ಹೆದ್ದಾರಿ ಪಕ್ಕದ ರಸ್ತೆ, ಚರಂಡಿ ನಿರ್ಮಾಣ, ನನೆಗುದಿಗೆ ಬಿದ್ದ ನಗರೋತ್ಥಾನ ಕೆಲಸಗಳಿಗೆ ವೇಗ ಹೀಗೆ ಹಲವು ಅಭಿವೃದ್ಧಿ ಕಾರ್ಯಗಳು ಹನುಮಂತನ ಬಾಲದಂತೆ ಬೆಳೆಯುತ್ತಿವೆ. ಕಾಲಮಿತಿಯೊಳಗೆ ಇವುಗಳನ್ನೆಲ್ಲ ಪೂರ್ಣಗೊಳಿಸಿ ಪಟ್ಟಣದ ಅಭಿವೃದ್ಧಿಗೆ ವೇಗ ನೀಡಬೇಕಿದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬಂದಿದೆ.
ಸಾಮಾನ್ಯ ಸಭೆ ಇಂದು
ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಸೆ.೧೮ ರಂದು ಸಾಮಾನ್ಯ ಸಭೆ ನಡೆಯಲಿದೆ. ಪಪಂ ಸಭಾಭವನದಲ್ಲಿ ಬೆಳಗ್ಗೆ ೧೧ ಗಂಟೆಗೆ ನಡೆಯುವ ಸಭೆಯ ಅಧ್ಯಕ್ಷತೆಯನ್ನು ಪಪಂ ಅಧ್ಯಕ್ಷೆ ಬಿ.ಆರ್.ಚೌಹಾಣ್ ವಹಿಸಲಿದ್ದಾರೆ ಎಂದು ಮುಖ್ಯಾಕಾರಿ ಎಸ್.ಬಿ.ಪಾಟೀಲ ತಿಳಿಸಿದ್ದಾರೆ.
ಎರಡೂವರೆ ವರ್ಷದಿಂದ ಅಕಾರವಿಲ್ಲ ಎನ್ನುತ್ತಿದ್ದು ಸದಸ್ಯರು ಇದೀಗ ಪಟ್ಟಣದ ಅಭಿವೃದ್ಧಿಗೆ ವೇಗ ನೀಡಬೇಕಿದೆ. ಹಲವು ದೊಡ್ಡ ದೊಡ್ಡ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದು ಅವುಗಳಿಗೆಲ್ಲ ಕಾಯಕಲ್ಪ ನೀಡಿ ಪಟ್ಟಣದ ಅಭಿವೃದ್ಧಿಗೆ ಮುಂದಾಗಬೇಕಿದೆ.
-ರಾಘವೇಂದ್ರ ಗೌಡರ, ನಿವಾಸಿ.
—
ಕಳೆದ ಎರಡೂವರೆ ವರ್ಷದಿಂದ ಪಟ್ಟಣದಲ್ಲಿ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಆಗಿಲ್ಲ. ಎಲ್ಲ ಸದಸ್ಯರು ಸೇರಿ ಜನರಿಗೆ ಮೂಲ ಸೌಕರ್ಯ ದೊರಕಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಅಭಿವೃದ್ಧಿ ಮೂಲಕವೇ ಮಾದರಿ ಪಟ್ಟಣವನ್ನಾಗಿ ರೂಪಿಸುತ್ತೇವೆ.
-ಸುಜಾತ ತತ್ರಾಣಿ, ಪಪಂ ಸದಸ್ಯೆ.