2ನೇ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆ
ಬಾಗಲಕೋಟೆ
ಸರಕಾರದ ಯೋಜನೆಗಳು ಕಾರ್ಯಗತಗೊಳಿಸುವುದರ ಜೊತೆಗೆ ಅವುಗಳ ಲಾಭ ಜನರಿಗೆ ತಲುಪಿಸುವ ಕೆಲಸವಾಗಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಅಧಿಕಾರಿಗಳಿಗೆ ತಿಳಿಸಿದರು.
ಜಿ.ಪಂ ನೂತನ ಸಭಾಭವನದಲ್ಲಿ ಶನಿವಾರ ಜರುಗಿದ ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಭಿವೃದ್ದಿ ಕಾರ್ಯ ಒಂದು ಕಡೆಯಾದರೆ ಜನ ಕಲ್ಯಾಣ ಕಾರ್ಯದಲ್ಲಿ ಸೌಲಭ್ಯಗಳು ಜನರಿಗೆ ತಲುಪಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಲು ಸೂಚಿಸಿದರು.
ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಕೃಷಿ, ತೋಟಗಾರಿಕೆ, ನರೇಗಾ, ಸ್ವಚ್ಛಭಾರತ ಸೇರಿದಂತೆ ಇತರೆ ಇಲಾಖೆಗಳ ಪ್ರಗತಿ ಪರಿಶೀಲನೆ ಕೈಗೊಂಡರು.
ಜಿಲ್ಲೆಯ ಶೈಕ್ಷಣಿಕ ಪ್ರಗತಿಯಾಗಬೇಕಾದರೆ, ಪ್ರಾಥಮಿಕ ಹಂತದಲ್ಲಿಯೇ ಮಕ್ಕಳು ಸುಧಾರಣೆಯಾಗಬೇಕು ಅಂದಾಗ ಮಾತ್ರ ಮುಂದಿನ ಹಂತರದಲ್ಲಿ ಉತ್ತಮ ಫಲಿತಾಂಶ ಬರಲು ಸಾಧ್ಯವಾಗುತ್ತದೆ. ಶಾಲೆಗಳಲ್ಲಿ ಮೂಲಭೂತ ಸೌಲಭ್ಯಕ್ಕೆ ಹೆಚ್ಚು ಒತ್ತು ಕೊಟ್ಟು ನರೇಗಾದಡಿ ಕೈಗೊಳ್ಳಬಹುದಾದ ಶಾಲಾ ಕೌಂಪಂಡ್, ಶೌಚಾಲಯ ಸೇರಿದಂತೆ ಇತರೆ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಕೇಂದ್ರ ಪುರಷ್ಕøತ ಯೋಜನೆಗಳು ಸರಿಯಾಗಿ ಕಾರ್ಯಗತಗೊಳಿಸಲು ತಿಳಿಸಿದ ಅವರು ಸುಕನ್ಯಾ ಸಮೃದ್ದಿ ಯೋಜನೆಯ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.
ಕೃಷಿ ಇಲಾಖೆಗೆ ಸಂಬಂಧಿಸಿದ ಕೇಂದ್ರ ಸರಕಾರದ ಯೋಜನೆಗಳು ಸಾಕಷ್ಟಿದ್ದು, ಆ ಯೋಜನೆಗಳು ರೈತರುಗೆ ತಲುಪಬೇಕು. ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಮಾಡಿ ಯೋಜನೆಯ ಲಾಭ ಅರ್ಹ ಫಲಾನುಭಗಳು ಪಡೆಯುವಂತಾಗಬೇಕು. ಕೇವಲ ಕಾರ್ಯಕ್ರಮ ಮಾಡಿದರೆ ಸಾಲದು ರೈತರಿಗೆ ತಲುಪಿಸುವ ಕಾರ್ಯ ಮಾಡಲು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ತಿಳಿಸಿದರು.
ಮಣ್ಣು ಪರೀಕ್ಷೆ ಕೈಗೊಂಡ ಮಣ್ಣಿನ ಫಲವತ್ತತೆಗೆ ತಕ್ಕಂತ ಬೆಳೆ ಬೆಳೆಯಲು ರೈತರಿಗೆ ಸಲಹೆ ನೀಡಿ ಉತ್ತಮ ಫಸಲು ಪಡೆದು ಆರ್ಥಿಕವಾಗಿ ಸಬಲರಾಗುವಂತೆ ಮಾಡಲು ತಿಳಿಸಿದರು.
ತೋಟಗಾರಿಕೆ ಬೆಳೆಯಲ್ಲಿ ತಾಳೆ ಎಣ್ಣೆ ಅಭಿಯಾನ ಕೈಗೊಂಡು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಪ್ರೋತ್ಸಾಹಿಸಲು ತಿಳಿಸಿದರು.
ನರೇಗಾ ಯೋಜನೆಯಡಿ ನಮ್ಮ ಹೊಲ ನಮ್ಮ ರಸ್ತೆಯಡಿ ರಸ್ತೆಗಳು ಹಾಳಾಗಿದ್ದು, ಅವುಗಳ ದುರಸ್ಥಿ ಕಾಮಗಾರಿಗಳನ್ನು ಕೈಗೊಳ್ಳಲು ತಿಳಿಸಿದ ಅವರು ಸ್ವಚ್ಛಭಾರತ ಯೋಜನೆಯಡಿ ಸ್ವಚ್ಚ ಗ್ರಾಮವನ್ನಾಗಿ ಮಾಡಬೇಕು. ಕಸ ವಿಲೇವಾರಿಗೆ ಕ್ರಮಕೈಗೊಳ್ಳಲು ತಿಳಿಸಿದರು. ಜೆಜೆಎಂ ಯೋಜನೆಯಡಿ ಪ್ರತಿ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಕಾರ್ಯ ಸರಿಯಾಗಿ ಆಗಬೇಕು.
ಇದಕ್ಕಾಗಿ ಸರಕಾರ ಸಾಕಷ್ಟು ಹಣ ಖರ್ಚು ಮಾಡಿದ್ದು, ಕೆಲವೊಂದು ಕಡೆ ನೀರು ಬರುತ್ತಿಲ್ಲವೆಂದರೆ ಹೇಗೆ? ಎಂದು ಪ್ರಶ್ನಿಸಿದ ಅವರು ಸಮಸ್ಯೆ ಇರುವ ಕಡೆ ಭೇಟಿ ನೀಡಿ ಪರಿಶೀಲಿಸಿದ ಸರಿಪಡಿಸುವ ಕೆಲವಾಗಬೇಕು ಎಂದರು.
ನಗರ ಪ್ರದೇಶಗಳಲ್ಲಿ ದಿನದ 24 ಗಂಟೆಗಳ ಕಾಲ ನೀರು ಪೂರೈಸುವ ಯೋಜನೆ ಜಮಖಂಡಿ ಹೊರತುಪಡಿಸಿ ಉಳಿದ ಸ್ಥಳೀಯ ಸಂಸ್ಥೆಗಳಲ್ಲಿ ಟೆಂಡರ್ ಆಗಿದ್ದು, ಕೆಲಸವನ್ನು ವರ್ಷದಲ್ಲಿ ಪೂರ್ಣಗೊಳಿಸಲು ತಿಳಿಸಿದರು.
ವಿಶ್ವಕರ್ಮ ಯೋಜನೆಯಡಿ ತಾಲೂಕಾ ಹಾಗೂ ಗ್ರಾಮ ಮಟ್ಟದಲ್ಲಿ ಅರಿವು ಚಟುವಟಿಕೆಗಳನ್ನು ಕೈಗೊಳ್ಳಬೇಕು ಅಂದಾಗ ಮಾತ್ರ ಯೊಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಾಧ್ಯವಾಗುತ್ತದೆ. ನೇಕಾರಿಗೆ ಕಸಬನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಕೆಲಸ ಮಾಡಲು ಸೂಚಿಸಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಐಎಫ್‍ಎಸ್ ಅಧಿಕಾರಿ, ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಜಿ.ಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಮುಖ್ಯ ಯೋಜನಾಧಿಕಾರಿ ಪುನಿತ್, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.