ಬಾಗಲಕೋಟೆ
ರಾಜ್ಯ ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರು ನ.15 ರಂದು ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆ ನಡೆಸಲಿದ್ದು, ಎಲ್ಲ ಇಲಾಖೆಗಳ ಅಕಾರಿಗಳು ಅಗತ್ಯ ಸಿದ್ಧತೆಯಲ್ಲಿರಬೇಕು ಎಂದು ಡಿಸಿ ಕೆ.ಎಂ.ಜಾನಕಿ ಸೂಚಿಸಿದರು.
ನಗರದ ಜಿಪಂ ಹಳೆಯ ಸಭಾಂಗಣದಲ್ಲಿ ಮಂಗಳವಾರ ಸಂಜೆ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸಭೆಯ ಪೂರ್ವಸಿದ್ಧತೆ ಕುರಿತು ಅಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು ಜಿಲ್ಲೆಯಲ್ಲಿರುವ ಎಲ್ಲ ಇಲಾಖೆಗಳಲ್ಲಿನ ಕಳೆದ ಮೂರು ವರ್ಷಗಳಲ್ಲಿ ಸಾಮಾನ್ಯ ಕಾರ್ಯಕ್ರಮ ಮತ್ತು ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಗಳಡಿ ಕಲ್ಯಾಣ ಕಾರ್ಯಕ್ರಮ, ನಾನಾ ಯೋಜನೆಗಳ ಕುರಿತು ಪ್ರಶ್ನಾವಳಿಗಳ ರೀತಿಯಲ್ಲಿ ಅಕಾರಿಗಳೊಂದಿಗೆ ಚರ್ಚಿಸಲಿದ್ದು, ಅಕಾರಿಗಳು ನಿಖರವಾದ ಮಾಹಿತಿಯನ್ನು ಮತಕ್ಷೇತ್ರವಾರು ತಯಾರಿ ಹೊಂದಿರಬೇಕು ಎಂದು ಹೇಳಿದರು.
ಸಭೆಗೆ ಜಿಲ್ಲಾಮಟ್ಟದ ಎಲ್ಲ ಇಲಾಖೆಗಳ ಅಕಾರಿಗಳು ಕಡ್ಡಾಯವಾಗಿ ಹಾಜರಾಗಿ ಸಮಿತಿಗೆ ಮಾಹಿತಿ ಒದಗಿಸಲು ಕ್ರಮ ಕೈಗೊಳ್ಳಬೇಕು. ಸಮಿತಿ ಸಭೆ ನಡೆಸಲು ಸೂಕ್ತ ವ್ಯವಸ್ಥೆ ಮಾಡುವುದರೊಂದಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಸ್ವಾಗತಿಸಲು ಅವಶ್ಯವಿರುವ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶರಿಗೆ ಸೂಚಿಸಿದರು.
ಜಿಪಂ ಸಿಇಒ ಶಶಿಧರ ಕುರೇರ್, ಆಯಾ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದವರಿಗೆ ಇರುವ ಸೌಲಭ್ಯಗಳಾವುವು? ಅನುದಾನದ ವಿವರ, ಬಳಕೆ ಮತ್ತು ಉಳಿದಿರುವ ಅನುದಾನ ಮತ್ತು ಅಂಕಿ ಅಂಶಗಳ ಬಗ್ಗೆ ಸರಿಯಾದ ಮಾಹಿತಿ ಇರಬೇಕು ಎಂದರು.
ಎಸ್‌ಪಿ ಅಮರನಾಥ ರೆಡ್ಡಿ, ಸುಳ್ಳು ಜಾತಿ ಪ್ರಕರಣ, ದಲಿತ ಸಮುದಾಯದವರ ಮೇಲೆ ಹಲ್ಲೆ ಅಥವಾ ಬಹಿಷ್ಕಾರ ಮಾಡಿರುವ ಪ್ರಕರಣಗಳ ಕುರಿತು ಮಾಹಿತಿ ಕೇಳುವದರಿಂದ ಸಿದ್ಧತೆ ಸರಿಯಾಗಿ ಮಾಡಿಕೊಳ್ಳಿ. ಅನಗತ್ಯ ಗೊಂದಲ ಸೃಷ್ಠಿಸಿಕೊಳ್ಳಬೇಡಿ ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಕಾರಿ ರುತ್ರೇನ.ಪಿ., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ ಹಾಗೂ ನಾನಾ ಇಲಾಖೆಗಳ ಜಿಲ್ಲಾಮಟ್ಟದ ಅಕಾರಿಗಳು ಉಪಸ್ಥಿತರಿದ್ದರು.