ಅಮೀನಗಡ
ಕನ್ನಡ ರಾಜ್ಯೋತ್ಸವದ ಮೂಲಕ ಪಟ್ಟಣದ ಜನತೆಗೆ ಸ್ವಚ್ಛತೆಯ ಅರಿವು ಮೂಡಿಸುವಲ್ಲಿ ಇಲ್ಲಿನ ಪಪಂ ಆಡಳಿತ ವಿನೂತನ ಜಾಗೃತಿ ಕಾರ್ಯಕ್ರಮ ನಡೆಸಿತು.
ಪಟ್ಟಣದಲ್ಲಿ ಕಸ ವಿಲೇವಾರಿ ಸೇರಿದಂತೆ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಸ್ಥಳೀಯ ಆರೋಗ್ಯ ಶಾಖೆಯಿಂದ ಈಗಾಗಲೆ ಹಲವು ಕಾರ್ಯಕ್ರಮ ಹಾಕಿಕೊಂಡು ಕೇಂದ್ರ ಸರಕಾರದ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ಪ್ರತಿ ವರ್ಷ ಉತ್ತಮ ಸಾಧನೆಯತ್ತ ದಾಪುಗಾಲು ಹಾಕುತ್ತಿದೆ.
ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಸ್ವರಗಳನ್ನು ತಿಳಿಸುವುದರೊಂದಿಗೆ ಅಲ್ಲಿಯೂ ಸ್ವಚ್ಛತೆಯ ಕುರಿತು ಜನರಲ್ಲಿ ಹೇಗೆ ಅರಿವು ಮೂಡಿಸಬೇಕೆಂದು ಚಿಂತಿಸಿದ ಇಲ್ಲಿನ ಕಿರಿಯ ಆರೋಗ್ಯ ನಿರೀಕ್ಷಕ ಸಂತೋಷ ವ್ಯಾಪಾರಿಮಠ ಹೊಸದೊಂದು ಜಾಗೃತಿಗೆ ಮುಂದಾಗಿದ್ದಾರೆ.
ಕನ್ನಡ ಸ್ವರಗಳಾದ ಅ ದಿಂದ ಆ: ವರೆಗೆ ಪ್ರತಿ ಅಕ್ಷರಕ್ಕೂ ಒಂದೊಂದು ಸಾಲು ಸೇರಿಸಿದ್ದಾರೆ. ಉದಾಹರಣೆಗೆ ಅ-ಅಲ್ಲಿ ಇಲ್ಲಿ ಕಸ ಎಸೆಯಬೇಡಿ, ಆ-ಆ ಕಸ ಜೀವಿಗಳ ಆರೋಗ್ಯ ಕೆಡಿಸುತ್ತದೆ, ಇ-ಇರುವ ಕಸವನ್ನು ಬೇರ್ಪಡಿಸಿ ಕಸದ ವಾಹನಕ್ಕೆ ಕೊಡಿ, ಈ-ಈ ರೀತಿ ಕಸ ವಿಲೇವಾರಿಗೆ ಸಹಕರಿಸಿ, ಉ-ಉತ್ತಮವಾದ ಶುಚಿ ಪರಿಸರ ನಮ್ಮದಾಗಲಿ, ಊ-ಊರಿನ ಸೌಂದರ್ಯ ಕಸ ಮುಕ್ತ ಪರಿಸರದಲ್ಲಿದೆ, ಋ-ಋಣಾತ್ಮಕ ಪರಿಣಾಮ ಬೀರುವ ಪ್ಲಾಸ್ಟಿಕ್ ಬೇಡವೇ ಬೇಡ, ಎ-ಎಲ್ಲೆಡೆ ಸ್ವಚ್ಛತೆಯ ಅರಿವು ಮೂಡಿಸೋಣ, ಏ-ಏರುತ್ತಿರುವ ಮಾಲಿನ್ಯ ತಡೆಯಲು ಕಸಕ್ಕೆ ಬೆಂಕಿ ಹಾಕದಿರೋಣ, ಒ-ಒಂದು ಹೆಜ್ಜೆ ಸ್ವಚ್ಚತೆಯ ಕಡೆಗೆ ಹೀಗೆ ಅ: ವರೆಗೆ ಹಲವು ಘೋಷಣೆ ಮೂಲಕ ಜಾಗೃತಿ ಮೂಡಿಸಲು ಪಪಂ ಆಡಳಿತ ಮುಂದಾಗಿದೆ.
ಕನ್ನಡ ರಾಜ್ಯೋತ್ಸವ ಆಚರಣೆ
ಪಪಂ ಕಚೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷೆ ಬಿ.ಆರ್.ಚೌಹಾಣ್ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಉಪಾಧ್ಯಕ್ಷೆ ಉಮಾಶ್ರೀ ಹಣಗಿ, ಮುಖ್ಯಾಧಿಕಾರಿ ಎಸ್.ಬಿ.ಪಾಟೀಲ, ಸದಸ್ಯರಾದ ವಿಜಯಕುಮಾರ ಕನ್ನೂರ, ಜೆಎಚ್‌ಐ ಸಂತೋಷ ವ್ಯಾಪಾರಿಮಠ, ಸಿಬ್ಬಂದಿ, ಪೌರ ಕಾರ್ಮಿಕರು ಇದ್ದರು.