ಅಮೀನಗಡ
ಹಿಂದು ಧರ್ಮವನ್ನು ಒಡೆಯುವ ಕೆಲಸ ನಡೆಯುತ್ತಿದ್ದು ಎಚ್ಚರವಾಗಿರಬೇಕು ಎಂದು ಆರೆಸ್ಸೆಸ್‌ನ ಹುಬ್ಬಳ್ಳಿ ಸಾಮಾಜಿಕ ಸಾಮರಸ್ಯದ ಪ್ರಾಂತ ಸಹ ಸಂಯೋಜಕ ಸೂ.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ಆರೆಸ್ಸೆಸ್ ನಗರ ವಾರ್ಷಿಕೋತ್ಸವ ನಿಮಿತ್ತ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಹಿಂದು ಸಮಾಜದ ಸಂಘಟನೆಗೆ 100 ವರ್ಷದ ಹಿಂದೆ ಹುಟ್ಟಿಕೊಂಡ ಆರೆಸ್ಸೆಸ್ ಸಂಘಟನೆ ನಗರ, ಗ್ರಾಮ ಸೇರಿದಂತೆ 60 ಸಾವಿರ ಶಾಖೆಗಳನ್ನು ಹೊಂದಿದ್ದು 1 ಲಕ್ಷ 75 ಸಾವಿರ ಸೇವಾ ಚಟುವಟಿಕೆ ನಡೆಸಿದೆ ಎಂದರು.
ರಾಜಕೀಯ, ಜಾತಿಯ ಆಶಯವಿಲ್ಲದೆ ಆರೆಸ್ಸೆಸ್ ಸಂಘಟನೆ ಸಹಾಯ, ಸಹಕಾರ, ಸೇವಾ ಭಾವನೆ ಕಲಿಸುತ್ತದೆ. ಹಿಂದು ಸಮಾಜ, ಸಂಸ್ಕೃತಿ ಉಳಿವಿಗೆ ಮನೆಯೇ ಮೊದಲ ಪಾಠಶಾಲೆ ಆಗಬೇಕು. ಮನೆಯಲ್ಲಿ ಜಾತಿ ಇರಲಿ, ಆದರೆ ಹೊರಗೆ ಬಂದಾಗ ನಾವೆಲ್ಲ ಹಿಂದುಗಳಾಗಿರೋಣ. ಮತಾಂತರ ಸೇರಿದಂತೆ ಹಲವು ಚಟುವಟಿಕೆ ಮೂಲಕ ನಮ್ಮಲ್ಲಿ ಒಗ್ಗಟ್ಟು ಒಡೆಯುವ ಪ್ರಸಂಗಗಳು ನಡೆಯುತ್ತಿದ್ದು ಎಲ್ಲರೂ ಎಚ್ಚರವಾಗಿರಬೇಕು. ದೇಶ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದ್ದು ಹಿಂದೂ ಸಮಾಜ ಕಾಪಾಡುವ ಯೋಗ್ಯರಿಗೆ ಬೆಂಬಲ ಕೊಡಿ ಎಂದು ಕರೆ ನೀಡಿದರು.
ನಿವೃತ್ತ ಉಪ ಪ್ರಾಂಶುಪಾಲ ಎಸ್.ಎಸ್.ಶಿರೋಳ ಮಾತನಾಡಿದರು.