ಅಮೀನಗಡ ಪಪಂ ಸಾಮಾನ್ಯ ಸಭೆ
ಅಮೀನಗಡ
ಪಟ್ಟಣದಲ್ಲಿ ಭೂ ಪರಿವರ್ತನೆ ಆದ ಜಾಗದಲ್ಲಿ ಉದ್ಯಾನವನ ಹಾಗೂ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ಜಾಗಗಳನ್ನು ಪಟ್ಟಣ ಪಂಚಾಯಿತಿ ಕೆಲ ಸಿಬ್ಬಂದಿ ಹಣಕ್ಕಾಗಿ ಮಾರಿಕೊಳ್ಳುತ್ತಿದ್ದಾರೆ ಎಂದು ಪಪಂ ಸದಸ್ಯ ತುಕಾರಾಮ ಲಮಾಣಿ ಆರೋಪಿಸಿದರು.
ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ನಡೆದ 2ನೇ ಸಾಮಾನ್ಯ ಸಭೆಯಲ್ಲಿ ಈ ಕುರಿತು ಗಂಭೀರ ಆರೋಪ ಮಾಡಿದ ಅವರು, ಅಂದಾಜು 100ಕ್ಕೂ ಹೆಚ್ಚು ಸಿಎ ಸೈಟ್ಗಳು ಅನ್ಯರ ಪಾಲಾಗಿವೆ. ಇಲ್ಲಿ ಸಿಬ್ಬಂದಿಯೇ ಸರ್ವೇ ನಂಬರ್ ಇಲ್ಲದೆ ಉತಾರ ಸೃಷ್ಠಿಸುತ್ತಿದ್ದಾರೆ. ಈ ಕುರಿತು ತಮ್ಮ ಬಳಿ ಎಲ್ಲ ದಾಖಲೆಗಳಿವೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಕೆಲ ದಾಖಲೆಗಳು ಲಭ್ಯವಾಗಿದ್ದು ಮುಂದಿನ ದಿನದಲ್ಲಿ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಬಿಡುಗಡೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಆಗಸ್ಟ್ ತಿಂಗಳಿನಿಂದ ಅಕ್ಟೋಬರ್ ತಿಂಗಳ ಜಮಾ ಖರ್ಚು ಪಟ್ಟಿ ನೋಡುತ್ತಲೇ ಗರಂ ಆದ ಸದಸ್ಯ ಸಂಜಯ ಐಹೊಳ್ಳಿ, ಹಾರ, ತುರಾಯಿಗೂ ಸಾವಿರಾರು ರೂ. ಖರ್ಚು ಮಾಡುವುದೆಂದರೆ ಹೇಗೆ? ಅಗ್ನಿ ಶಾಮಕದಳದ ಭೂಮಿ ಪೂಜೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮದ ಪೋಟೊಗಾಗಿ ಏಳೂವರೆ ಸಾವಿರ ರೂ. ಖರ್ಚು ಮಾಡಲಾಗಿದೆ. 10 ಸಾವಿರದವರೆಗೆ ಖರ್ಚು ಮಾಡಬಹುದು ಎಂದಿದ್ದರೂ ಪಟ್ಟಿಯಲ್ಲಿ 500, 1000 ಸಾವಿರದ ಲೆಕ್ಕವೇ ಕಾಣುತ್ತಿಲ್ಲ. ಎಲ್ಲವೂ 10 ಸಾವಿರದ ಆಸುಪಾಸು ಕಾಣುತ್ತಿವೆ. ಇದನ್ನು ಗಮನಿಸಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಪಂ ಸದಸ್ಯೆ ಸುಜಾತಾ ತತ್ರಾಣಿ, ಆಗಸ್ಟ್ನಿಂದ ಅಕ್ಟೊಬರ್ವರೆಗಿನ ಜಮಾ-ಖರ್ಚು ಗಮನಿಸಿದರೆ 10 ರೂ. ಖರ್ಚಾಗುವಲ್ಲಿ 100 ರೂ. ಖರ್ಚಾದಂತೆ ತೋರುತ್ತಿದೆ. 2 ವರ್ಷವಾದರೂ ಕೆಲ ಕಾಮಗಾರಿಗಳ ಬಿಲ್ ಆಗಿಲ್ಲ. ಇಲ್ಲಿನ ಸಣ್ಣಪುಟ್ಟ ಕೆಲಸಕ್ಕೂ ಹೆಚ್ಚಿನ ಬಿಲ್ ನಮೂದಿಸಿದಂತೆ ಕಾಣುತ್ತಿದೆ. ಸಾರ್ವಜನಿಕರ ಹಣ ಈ ರೀತಿ ಪೋಲಾದರೆ ಅಭಿವೃದ್ಧಿ ಕಾರ್ಯ ನಡೆಯುವುದಾದರು ಹೇಗೆ ಎಂದು ಪ್ರಶ್ನಿಸಿದರು.
ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಬಗ್ಗೆ ಕೇಳಿದ ಪ್ರಶ್ನೆಗೆ ಸಿಬ್ಬಂದಿ ರಮೇಶ ಕಡ್ಲಿಮಟ್ಟಿ, ಜನರಿಗೆ ತೊಂದರೆ ಆಗಬಾರದೆಂದು ಘಟಕಗಳು ಆರಂಭವಾಗಿವೆ. ಗುತ್ತಿಗೆ ಕೈಗೊಂಡ ವ್ಯಕ್ತಿ ಕೈ ಕೊಟ್ಟಿದ್ದರಿಂದ ಸಮಸ್ಯೆ ಆಗಿದೆ. ಪಟ್ಟಣದ ಎಲ್ಲ ಘಟಕಗಳಿಂದ ಯಾವುದೇ ಲಾಭವೂ ಇಲ್ಲ, ಹಾನಿಯೂ ಇಲ್ಲ. ಅವುಗಳನ್ನೆಲ್ಲ ನಿರ್ವಹಣೆ ಮಾಡಿದರೆ ಸಾಕಾಗಿದೆ ಎಂದರು.
ಪಟ್ಟಣದಲ್ಲಿ ನಗರೋತ್ಥಾನ ಕಾಮಗಾರಿಗಳು ವಿಳಂಬವಾಗಿದೆ ಎಂದು ದೂರಿದ ಸದಸ್ಯರು ವಿಳಂಬ ಕುರಿತು ಪಪಂಗೆ ಸಂಬಂಧವಿಲ್ಲ ಎಂಬ ಹಾರಿಕೆ ಉತ್ತರ ಬೇಡ. ಡಿಸಿ ಗಮನಕ್ಕೆ ತನ್ನಿ, ಗುತ್ತಿಗೆದಾರರೇ ಬೇರೆ, ಕಾಮಗಾರಿ ನಿರ್ವಹಿಸುವವರೇ ಬೇರೆ ಆಗಿದ್ದು ಯಾರನ್ನು ಕೇಳೋಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಮ ನಿರ್ದೇಶಿತ ಸದಸ್ಯ ಯಮನಪ್ಪ ಬಂಡಿವಡ್ಡರ, ಪಟ್ಟಣದಲ್ಲಿ ಆರಂಭವಾದ ಕುಡಿಯುವ ನೀರಿನ ಕಾಮಗಾರಿಯಲ್ಲಿ ಅಂದಾಜು 8.5 ಕಿ.ಮೀ. ಕಳಪೆ ಆಗಿದ್ದರ ದೂರು ಬಂದಿದೆ. ಈ ಕುರಿತು ಇಲಾಖೆಗೆ ಪತ್ರ ಬರೆದಿದ್ದರೂ ಯಾವುದೇ ಉತ್ತರವಿಲ್ಲ ಎಂದು ಆರೋಪಿಸಿದರು. ಇದಕ್ಕುತ್ತರಿಸಿದ ಒಳಚರಂಡಿ ಮಂಡಳಿಯ ಎಇಇ, ಏಜನ್ಸಿಯೊಂದಿಗೆ ಮಾತನಾಡುತ್ತೇನೆ. ಈ ಕುರಿತ ಚರ್ಚೆಗೆ ಪ್ರತ್ಯೇಕ ಸಭೆ ನಿಗಪಡಿಸಿ ಎಂದರು.
ಮುಖ್ಯಾಧಿಕಾರಿ ಸುರೇಶ ಪಾಟೀಲ ಮಾತನಾಡಿ, ನಗರೋತ್ಥಾನ ಕಾಮಗಾರಿಯಲ್ಲಿನ ಕೆಲ ವಾರ್ಡ್ಗಳಲ್ಲಿ ಕೆಲ ಮುಖಂಡರು ತಾವೇ ಕೆಲಸ ನಿರ್ವಹಿಸುತ್ತೇವೆಂದು ದುಂಬಾಲು ಬಿದ್ದಿದ್ದರಿಂದ ಕಾಮಗಾರಿ ವಿಳಂಬದ ಸಂಶಯವಿದೆ. ಡಿಸಿ ಹಾಗೂ ಯೋಜನಾ ನಿರ್ದೇಶಕರ ಗಮನಕ್ಕೆ ತರುತ್ತೇನೆ. ನಾನು ಅಧಿಕಾರ ವಹಿಸಿಕೊಂಡ ನಂತರ ಬಾಕಿಯಿರುವ ಬಿಲ್ ಪಾವತಿಸಲಾಗುತ್ತಿದೆ. ಸದಸ್ಯರು ಹೇಳೋರಿಲ್ಲ, ಕೇಳೋರಿಲ್ಲ ಎಂಬ ಮಾತು ಸರಿಯಲ್ಲ. ಇಲ್ಲಿ ನಾವು ಮಜಾ ಮಾಡಲು ಬಂದಿಲ್ಲ ಎಂದು ಕೊಂಚ ಗರಂ ಆದರು.
ಪಪಂ ಅಧ್ಯಕ್ಷೆ ಬೇಬಿ ಚೌಹಾಣ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಉಮಾಶ್ರೀ ಹಣಗಿ, ಸದಸ್ಯರಾದ ಬಾಬು ಛಬ್ಬಿ, ವಿದ್ಯಾ ರಾಮವಾಡಗಿ, ರಾಘವೇಂದ್ರ ಮುಳ್ಳೂರ, ಗಣೇಶ ಚಿತ್ರಗಾರ, ಸಂತೋಷ ಐಹೊಳ್ಳಿ, ಸಂತೋಷ ಕಂಗಳ, ಶ್ರೀದೇವಿ ನಿಡಗುಂದಿ, ಬಸವರಾಜ ಬೇವೂರ, ತುಕಾರಾಮ ಲಮಾಣಿ, ವಿಜಯಕುಮಾರ ಕನ್ನೂರ, ನಾಮನಿರ್ದೇಶಿತ ಸದಸ್ಯರಾದ ಯಮನಪ್ಪ ನಾಗರಾಳ,ರಮೇಶ ಮುರಾಳ, ಯಮನಪ್ಪ ಬಂಡಿವಡ್ಡರ, ಸಿಬ್ಬಂದಿ ಇದ್ದರು.
ಸಭಾಪತಿ ಆಯ್ಕೆ ಯಾವಾಗ?
ಪಟ್ಟಣ ಪಂಚಾಯಿತಿ ಸಭಾಪತಿ ಆಯ್ಕೆ ನನೆಗುದಿಗೆ ಬಿದ್ದಿದ್ದು ಆಯ್ಕೆ ಯಾವಾಗ ಎಂಬ ಪ್ರಶ್ನೆ ಎದುರಾಗಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಂತರ ನಡೆಯುವ ಮೊದಲ ಸಭೆಯಲ್ಲೇ ಸಭಾಪತಿ ಆಯ್ಕೆ ನಡೆಯಬಹುದೆಂಬ ನಿರೀಕ್ಷೆ ಹುಸಿಯಾಯಿತು. ಎರಡೂವರೆ ತಿಂಗಳ ನಂತರ ಡಿ.2 ರಂದು ನಡೆದ ಸಭೆಯಲ್ಲೂ ಸಭಾಪತಿ ಆಯ್ಕೆ ಕುರಿತು ಯಾವುದೇ ಚರ್ಚೆ ನಡೆಯಲಿಲ್ಲ. ಮುಖ್ಯಾಧಿಕಾರಿಯನ್ನು ಕೇಳಿದರೆ ಈ ಸಭೆಯಲ್ಲಿ ಸಭಾಪತಿ ಆಯ್ಕೆ ಕುರಿತು ವಿಷಯವಿಲ್ಲ ಎಂದರು. ಪಪಂ ಸದಸ್ಯ ಸಂಜಯ ಐಹೊಳ್ಳಿ, ಅಧ್ಯಕ್ಷರ ಸೂಚನೆ ಮೇರೆಗೆ ಆಯ್ಕೆ ನಡೆಯಬಹುದು ಈ ಕುರಿತು ಅವರ ಗಮನಕ್ಕೆ ತರಲಾಗಿದೆ ಎಂದರು. ಆದರೆ ಸಭೆಯಲ್ಲಿ ಈ ಕುರಿತು ಯಾವುದೇ ಚರ್ಚೆ ನಡೆಯಲೇಇಲ್ಲ. ಮುಂದಿನ ಬಾರಿ ಸಭೆ ನಡೆಯುವ ಸಭೆಯಲ್ಲಾದರೂ ಸಭಾಪತಿ ಆಯ್ಕೆ ನಡೆಯುವಂತಾಗಲಿ ಎಂದು ಕೆಲ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.