ಅಮೀನಗಡ:
ದೈಹಿಕ ವಿಕಲತೆಗಿಂತ ಮಾನಸಿಕ ವಿಕಲತೆ ಘೋರವಾದುದು ಎಂದು ಶಿಕ್ಷಕ ಎಂ ಬಿ ವಂದಾಲಿ ಅಭಿಪ್ರಾಯಪಟ್ಟರು.
ಸಮೀಪದ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಶ್ವ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ, ದೈಹಿಕವಾಗಿ ಎಷ್ಟೇ ವಿಕಲತೆ ಹೊಂದಿದ್ದರೂ ಬಹಳಷ್ಟು ಜನ ಮಾನಸಿಕವಾಗಿ ವಿಶೇಷ ಚೈತನ್ಯವನ್ನು ಗಳಿಸಿರುತ್ತಾರೆ. ಇದೇ ಕಾರಣಕ್ಕೆ ಅವರನ್ನು ವಿಶೇಷ ಚೇತನರು ಎಂದು ಸಂಬೋಧಿಸಲಾಗುತ್ತದೆ ಎಂದರು.
ದೈಹಿಕವಾಗಿ ಸದೃಢರಾದ ಅಂತಹ ವ್ಯಕ್ತಿಗಳು ಮನಸ್ಸಿನಲ್ಲಿ ದುಷ್ಟ ವಿಚಾರಗಳನ್ನು ತುಂಬಿಕೊಂಡರೆ ಅವರೂ ಒಂದು ರೀತಿ ವಿಕಲರಿದ್ದಂತೆ. ಇಂತಹ ವಿಕಲತೆ ದೈಹಿಕ ವಿಕಲತೆಗಿಂತ ಘೋರವಾದದ್ದು ಎಂದರು.
ಇನ್ನೋರ್ವ ಶಿಕ್ಷಕ ಅಶೋಕ ಬಳ್ಳಾ ಮಾತನಾಡುತ್ತಾ, ದೈಹಿಕ ವಿಕಲತೆ ಎಂಬುದು ಒಂದು ಋಣಾತ್ಮಕ ಅಂಶವಾದರೂ ಅದನ್ನು ಧನಾತ್ಮಕವಾಗಿ ಬಳಸಿಕೊಳ್ಳುವ ಕೌಶಲ ಅಗತ್ಯವಾಗಿದೆ. ನಾನು ಅಂಗವಿಕಲ ಎಂಬ ಕೀಳರಿಮೆ ಭಾವನೆಯಿಂದ ಹೊರ ಬಂದು ನಮ್ಮೊಳಗಡೆ ಇರುವ ಸುಪ್ತ ಪ್ರತಿಭೆಯನ್ನು ಹೊರಹಾಕಿ ಸಾಧಕರೆನಿಸಿಕೊಳ್ಳಬೇಕು ಎಂದು ಕರೆಕೊಟ್ಟರು.
ಈ ಸಂದರ್ಭದಲ್ಲಿ ಶಾಲೆಯ ವಿಶೇಷ ಚೇತನ ಮಕ್ಕಳಾದ ಅಕ್ಷತಾ ಗುಡೂರ ಮತ್ತು ಮಹಾಂತೇಶ ಬೈಲಕೂರ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಮುಖ್ಯಗುರು ಪಿ ಎಸ್ ಮಾಲಗಿತ್ತಿ ಅಧ್ಯಕ್ಷತೆವಹಿಸಿ ಮಾತನಾಡಿ, ವಿಶೇಷ ಚೇತನ ಬಸವರಾಜ ಉಮರಾಣಿ ಹಾಗೂ ಗಾಯಕ ಮೆಹಬೂಬಸಾಬ ರಂತಹ ಸಾಧಕರು ನಮ್ಮ ಕಣ್ಮುಂದೆ ಇದ್ದಾರೆ ಅಂತವರನ್ನು ಸ್ಪೂರ್ತಿಯಾಗಿಟ್ಟುಕೊಂಡು ನಾವು ಸಾಧನೆಯತ್ತ ಮುನ್ನುಗ್ಗಬೇಕು ಎಂದರು.
ಶಿಕ್ಷಕರಾದ ಎಂಜಿ ಬಡಿಗೇರ, ಬಸಮ್ಮ ಘಟ್ಟಿಗನೂರ, ಎಸ್ ಡಿ ಎಂ ಸಿ ಸದಸ್ಯ ಮಲ್ಲಿಕ್ ಸಾಬ್ ನದಾಫ್, ರೇಣುಕಾ ಬೈಲಕೂರ ಉಪಸ್ಥಿತರಿದ್ದರು. ಅಮೃತ ಕೊಣ್ಣೂರ ನಿರೂಪಿಸಿದರು. ಭಾಗ್ಯ ಸೂಳಿಬಾವಿ ವಂದಿಸಿದರು.