ಅಮೀನಗಡ
ನಿರ್ಮಲತ್ವದ ಭಕ್ತಿ, ಜ್ಞಾನ ಹಾಗೂ ದಾನದಂತಹ ಸದ್ಗುಣ ಇರುವ ಮನುಷ್ಯನ ಮನಸ್ಸು ಪರಿಶುದ್ಧವಾಗಿರುತ್ತದೆ. ಇವು ದೊರೆಯಬೇಕಾದರೆ ಗುರುಕರುಣೆ ಪಡೆಯಬೇಕು ಎಂದು ಬಾಗಲಕೋಟೆಯ ಅಧ್ಯಾತ್ಮ ಚಿಂತಕ ಪ್ರದೀಪ ಗುರೂಜಿ ಹೇಳಿದರು.
ಸಮೀಪದ ಸೂಳೇಬಾವಿಯ ಶಿಕ್ಷಕ ಮಹಾಂತೇಶ ಪಾಟೀಲ ಕುಟುಂಬದ ಆಶ್ರಯದಲ್ಲಿ ಬೆನಕಟ್ಟಿಯ ಹೇಮ-ವೇಮ ಸದ್ಬೋಧನ ಪೀಠ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ವೇಮನರ 175ನೇ ಮಾಸಿಕ ತತ್ವ ಚಿಂತನ ಹಾಗೂ ಹೇಮರಡ್ಡಿ ಮಲ್ಲಮ್ಮ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಕನಕವಿದ್ದರೇನು ಕರುಣೆಯಿಲ್ಲದನಕ.. ಎನ್ನುವ ವೇಮನರ ವಚನದ ಕುರಿತು ಮಾತನಾಡಿದರು.
ಸಾಕಷ್ಟು ಆಸ್ತಿ, ಸಂಪತ್ತು ಹೊಂದಿದ್ದಾನೆAದರೆ ಅವನಲ್ಲಿ ಕರುಣೆಯೇ ಇಲ್ಲದಿದ್ದರೆ ಉಪಯೋಗವಿಲ್ಲ. ಗಳಿಸಿದ್ದರಲ್ಲಿ ಒಂದಿಷ್ಟನ್ನು ಪರಿಶುದ್ಧ ಭಾವನೆಯಿಂದ ಸತ್ಪಾತ್ರಕ್ಕೆ ಸಲ್ಲಿಸಿದರೆ ಮನುಷ್ಯ ಜೀವನ ಸಾರ್ಥಕವಾಗುತ್ತದೆ ಎಂಬುದನ್ನು ವೇಮನರು ಹೇಳಿದ್ದು, ಯಾರಲ್ಲಿ ಈಶ್ವರ ಕರುಣೆ, ಅಂತ:ಕರಣ, ಕರುಣೆ, ವೇದ ಕರುಣೆ, ಗುರುಕರುಣೆ ಇರುತ್ತದೆಯೋ ಅವರು ಭಗವಂತನಿಗೆ ಪ್ರೀಯರಾಗಿರುತ್ತಾರೆ. ಇದಕ್ಕೆ ಹೇಮರಡ್ಡಿ ಮಲ್ಲಮ್ಮ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.
ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಈಶ್ವರ ಕೋನಪ್ಪನವರ ಮಾತನಾಡಿದರು. ನಿವೃತ್ತ ಶಿಕ್ಷಕ ಮಹಾಂತಪ್ಪ ಎಮ್ಮಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಪಿಡ್ಡಪ್ಪ ಕುರಿ, ಹೇಮ-ವೇಮನ ಸದ್ಬೋಧನ ಪೀಠದ ನಿರ್ದೇಶಕ ರಂಗಪ್ಪ ಕಟಗೇರಿ, ಬಸವರಾಜ ಪಾಟೀಲ, ವಿ.ಆರ್.ವಜ್ಜರಮಟ್ಟಿ, ವಿಜಯಕುಮಾರ ಪಾಟೀಲ, ಹನಮಂತಗೌಡ ಬಾರಡ್ಡಿ, ಎಚ್.ಎನ್.ಮಾಚಾ, ಮಹಾಂತೇಶ ಪಾಟೀಲ ದಂಪತಿಗಳು, ಅಶೋಕ ಎಮ್ಮಿ, ಪಾಂಡುರಂಗ ಸನ್ನಪ್ಪನವರ, ಸತೀಶ ಬೇವೂರ, ಕಿರಣ ವಜ್ಜರಮಟ್ಟಿ ಇತರರಿದ್ದರು.