ರಕ್ಕಸಗಿಯಲ್ಲಿ ಸುಧಾರಣೆ ಕಾಣದ ರಸ್ತೆ
ನಿಮ್ಮ ಸುದ್ದಿ ವಿಶೇಷ ವರದಿ
ಹಳ್ಳಿಗಳ ಉದ್ಧಾರವೇ ದೇಶದ ಪ್ರಗತಿ, ಅಲ್ಲಿ ಮೂಲ ಸೌಲಭ್ಯ ದೊರಕಿಸಿದರೆ ದೇಶ ಸಹಜವಾಗಿ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತದೆ ಎಂದು ಹೇಳಲಾಗುತ್ತದೆ.
ಆದರೆ ಇಂದಿಗೂ ಅದೆಷ್ಟೊ ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಲಭ್ಯ ಮರೀಚಿಕೆ ಆಗಿವೆ. ಮೂಲಸೌಲಭ್ಯಕ್ಕಾಗಿ ಸರಕಾರಗಳು ಸಾಕಷ್ಟು ಅನುದಾನ, ಸೌಲಭ್ಯ ನೀಡಿದರೂ ಸ್ಥಳೀಯ ಆಡಳಿತ ನಿರ್ಲಕ್ಷವೋ? ಅಲ್ಲಿನ ಜನಪ್ರತಿನಿಗಳ ಬೇಜವಾಬ್ದಾರಿಯೋ ತಿಳಿಯದಾಗಿದೆ.
ಇದಕ್ಕೊಂದು ತಾಜಾ ನಿದರ್ಶನವೆಂದರೆ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮ. ಇಲ್ಲಿ ಗ್ರಾಪಂ ಕಚೇರಿ ಮೂಲಕ ಇತ್ತೀಚೆಗೆ ಕೂಡಲಸಂಗಮ ಮಾರ್ಗದತ್ತ ಜನ ಸಂಚಾರ ಆರಂಭಿಸಿದ್ದಾರೆ. ಆದರೆ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳುವ ಎಡಭಾಗದಲ್ಲೊಂದು ರಸ್ತೆ ಗಲೀಜಿನಿಂದ ತುಂಬಿದ್ದು ಇಲ್ಲಿನ ಜನ ಇಂತಹ ರಸ್ತೆಯಲ್ಲಿ ಹೇಗೆ ಸಂಚಾರ ಮಾಡುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತಿದೆ.
ಹಾಗಂತ ಈ ರಸ್ತೆ ಇತ್ತೀಚಿಗೆ ಕಂಡದ್ದಲ್ಲ. ಹಲವು ವರ್ಷಗಳಿಂದ ಇದೇ ಪರಿಸ್ಥಿತಿಯಲ್ಲಿದೆ. ಹಳ್ಳದ ಕಡೆ ತೆರಳುವ ಈ ಮಾರ್ಗದಲ್ಲಿ ಹತ್ತಾರು ಮನೆಗಳಿದ್ದು ತಮ್ಮ ಮನೆಗೆ ತೆರಳಲು ವಿಯಿಲ್ಲದೆ ಕೆಸರಲ್ಲೆ ಸಂಚರಿಸುವ ಪರಿಸ್ಥಿತಿ ಬಂದೊದಗಿದೆ.
ಅಲ್ಲಿನ ಗ್ರಾಪಂ ಸದಸ್ಯ ತುಳಸಪ್ಪ ಜಾಲಿಹಾಳ ಅವರನ್ನು ವಿಚಾರಿಸಿದರೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ರಸ್ತೆ ಸುಧಾರಣೆಗೆ ಹಲವು ಬಾರಿ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಆದರೆ ಅನುದಾನದ ಹೊಂದಾಣಿಕೆ ನೆಪವೊಡ್ಡುತ್ತಿರುವ ತಾಪಂ ಕಚೇರಿ ಅಕಾರಿಗಳು ಕೆಲವು ಯೋಜನೆಗಳನ್ನು ತಿರಸ್ಕರಿಸಿದ್ದಾರೆ. ಅದರಲ್ಲಿ ವಾರ್ಡ್ ನಂ.2ರ ಈ ರಸ್ತೆಯೂ ಇದೆ. ಈ ಬಾರಿಯೂ ಮತ್ತೆ ಕ್ರಿಯಾ ಯೋಜನೆಯಲ್ಲಿ ಸೇರಿಸಲಾಗಿದ್ದು ತಿರಸ್ಕೃತಗೊಳಿಸದಂತೆ ತಾಪಂ ಅಕಾರಿಗಳನ್ನು ವಿನಂತಿಸಲಾಗಿದೆ ಎಂದು ಹೇಳಿದರು.
ರಕ್ಕಸಗಿಯಲ್ಲಿ ಇದೊಂದೆ ರಸ್ತೆಯಲ್ಲ, ಹಲವು ರಸ್ತೆಗಳು ಅಭಿವೃದ್ಧಿ ಕಾಣಬೇಕಿದೆ. ಅಕಾರಿಗಳು, ಜನಪ್ರತಿನಿಗಳು ಗ್ರಾಮ ಸುಧಾರಣೆಗೆ ಮುಂದಾಗಬೇಕು.
-ಸಂಗು ಮಠ, ರಕ್ಕಸಗಿ ನಿವಾಸಿ.