ಇದಕ್ಕೂ ಮುನ್ನ, ಅಮಿತ್ ಶಾ ಸಮ್ಮುಖದಲ್ಲಿ ಯಡಿಯೂರಪ್ಪ ಭಾಷಣವನ್ನು ಮಾಡಿ ವಿಶ್ವೇಶತೀರ್ಥ ಶ್ರೀಗಳ ಕೊಡುಗೆಯನ್ನು ವಿವರಿಸಿದ್ದರು. ಆ ವೇಳೆ, ಅಮಿತ್ ಶಾ ಪಕ್ಕಕ್ಕೆ ಬಂದು ಕೂತ, ಅರವಿಂದ ಲಿಂಬಾವಳಿ ಅದೇನೋ ಚೀಟಿಯನ್ನು ಅಮಿತ್ ಶಾಗೆ ಕೊಟ್ಟಿದ್ದಾರೆ. ಅಮಿತ್ ಶಾ ಅವರ ಭದ್ರತೆಯವರು ಆ ಚೀಟಿಯನ್ನು ನೋಡಿ, ತಮ್ಮ ಜೇಬಿನೊಳಗೆ ಇಟ್ಟುಕೊಂಡಿದ್ದಾರೆ.
ಆ ವೇಳೆ ಏನನ್ನೂ ಲಿಂಬಾವಳಿ ಜೊತೆ ಮಾತನಾಡದೇ, ದೆಹಲಿಗೆ ಬರುವಂತೆ ಲಿಂಬಾವಳಿಯವರಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಚೀಟಿಯ ಬಗ್ಗೆ ಅಮಿತ್ ಶಾ ಹೆಚ್ಚೇನು ತಲೆಕೆಡಿಸಿಕೊಳ್ಳದೇ, ಲಿಂಬಾವಳಿ ಕಡೆ ತಿರುಗಿ ಕೂಡಾ ನೋಡಲಿಲ್ಲ.
ಈ ಕಾರ್ಯಕ್ರಮದಲ್ಲಿ ಅಮಿತ್ ಶಾ ಮಧ್ಯದಲ್ಲಿ ಕೂತಿದ್ದರು, ಅವರ ಒಂದು ಕಡೆ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಕುಳಿತಿದ್ದರು. ಇನ್ನೊಂದು ಕಡೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅರವಿಂದ ಲಿಂಬಾವಳಿ ಕೂತಿದ್ದರು. ಶ್ರೀಗಳ ಇನ್ನೊಂದು ಪಕ್ಕ ವಿಜಯೇಂದ್ರ ಕೂತಿದ್ದರು.
ಅಮಿತ್ ಶಾ ಅವರು ಕಾರ್ಯಕ್ರಮದ ತಮ್ಮ ಭಾಷಣದಲ್ಲಿ ವಿಜಯೇಂದ್ರ ಅವರ ಹೆಸರನ್ನು ಉಲ್ಲೇಖಿಸಿದೇ, ರಾಜ್ಯಾಧ್ಯಕ್ಷರು ಎಂದು ಮಾತ್ರ ಉಲ್ಲೇಖಿಸಿದ್ದಾರೆ. ತಮ್ಮ ಭಾಷಣ ಮುಗಿದ ಕೂಡಲೇ, ಅಮಿತ್ ಶಾ ಕಾರ್ಯಕ್ರಮದಿಂದ ಹೊರಟಿದ್ದಾರೆ. ಶ್ರೀಗಳ ಜೊತೆ ಮಾತುಕತೆ ನಡೆಸುತ್ತಿದ್ದ ವಿಜಯೇಂದ್ರರನ್ನು ತಂದೆ ಯಡಿಯೂರಪ್ಪ, ಅಮಿತ್ ಶಾ ಜೊತೆ ಕೂಡಲೇ ಹೋಗುವಂತೆ ಸೂಚಿಸಿದ್ದಾರೆ.
ತಮಿಳುನಾಡಿನ ಕಾರ್ಯಕ್ರಮವನ್ನು ಮುಗಿಸಿ ಅಮಿತ್ ಶಾ, ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲಿಂದ, ಕಾರ್ಯಕ್ರಮ ನಡೆದ ಕುಂದಲಹಳ್ಳಿ ಗೇಟ್ ಮತ್ತು ಕಾರ್ಯಕ್ರಮ ಮುಗಿದ ನಂತರ, ವಾಪಸ್ ವಿಮಾನ ನಿಲ್ದಾಣಕ್ಕೆ, ವಿಜಯೇಂದ್ರ ಅವರ ಜೊತೆ ಪ್ರಯಾಣಿಸಿದ್ದರು. ಆ ವೇಳೆ, ರಾಜಕೀಯ ಚರ್ಚೆ ನಡೆಯದೇ ಇರುತ್ತದೆಯೇ ಎಂದು ವಿಶ್ಲೇಷಿಸಲಾಗುತ್ತಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಬಣದಲ್ಲಿ ಕಾಣಿಸಿಕೊಳ್ಳುತ್ತಿರುವ ಅರವಿಂದ ಲಿಂಬಾವಳಿಯವರ ಮೇಲೆ ಅಮಿತ್ ಶಾ ಸಿಟ್ಟಾಗಿರಬಹುದು. ಮೂಲತಃ ಆರ್ ಎಸ್ ಎಸ್ ಮೂಲದವರಾಗಿ ಬಹಿರಂಗವಾಗಿ ಭಿನ್ನಮತ ಚಟುವಟಿಕೆ ನಡೆಸುವುದು ಸರಿಯೇ ಎನ್ನುವ ಕೋಪತಾಪ ಅವರಿಗಿದೆಯೇ ಎನ್ನುವುದು ಪ್ರಶ್ನೆಯಾಗಿದೆ.
ಅರವಿಂದ ಲಿಂಬಾವಳಿ ಕೂಡಾ, ಉಡುಪಿ ಮಠದ ಕಾರ್ಯಕ್ರಮದ ಬಗ್ಗೆ ತಮ್ಮ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ. ಆದರೆ, ಎಲ್ಲೂ ಅವರು ಯಡಿಯೂರಪ್ಪ ಅಥವಾ ವಿಜಯೇಂದ್ರ ಅವರ ಹೆಸರನ್ನು ಪ್ರಸ್ತಾವಿಸದೇ ಇರುವುದು, ಭಿನ್ನಮತದ ಕಾವು ಎಷ್ಟು ಎನ್ನುವುದರ ಅರಿವಾಗುತ್ತದೆ.