ಮಂಡ್ಯ: ಮೈಶುಗರ್ ಕಾರ್ಖಾನೆ ಅಯೋಧ್ಯೆ ರಾಮಮಂದಿರದಷ್ಟೇ ಪವಿತ್ರವಾಗಿದ್ದು, ರಾಮನನ್ನು ಪೂಜಿಸಿದಂತೆ ಮೈಶುಗರ್ ಕಾರ್ಖಾನೆಯನ್ನ ನಮ್ಮ ಜನ ಪೂಜೆ ಮಾಡುತ್ತಾರೆ. ಶೀಘ್ರದಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಸ ಕಾರ್ಖಾನೆಗೆ ಭೂಮಿ ಪೂಜೆ ಮಾಡಲಿದ್ದಾರೆ. ಅದಕ್ಕೂ ಮೊದಲು ಜಿಲ್ಲೆಯಾದ್ಯಂತ ಮಣ್ಣು ಸಂಗ್ರಹ ಮಾಡುತ್ತೇವೆ ಎಂದು ಶಾಸಕ ಗಣಿಗ ರವಿಕುಮಾರ್ ಮಾಹಿತಿ ವಿವರಿಸಿದರು.
ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿ ಮನೆಯಿಂದಲೂ ಒಂದು ಹಿಡಿ ಮಣ್ಣು ಸಂಗ್ರಹ ಮಾಡುತ್ತೇವೆ. ಆ ಪವಿತ್ರ ಮಣ್ಣನ್ನು ಹೊಸ ಕಾರ್ಖಾನೆ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತಿದ್ದು, ಈ ಮೂಲಕ ಜನರಿಗೆ ಮೈಶುಗರ್ ಕಾರ್ಖಾನೆ ನಮ್ಮದೆ ಎಂಬ ಭಾವನೆ ಮೂಡುವಂತೆ ಮಾಡುತ್ತೇವೆ ಎಂದು ತಿಳಿಸಿದರು.
ಮೈಶುಗರ್ ಕಾರ್ಖಾನೆ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆಯನ್ನು ನಿರ್ಮಾಣ ಮಾಡುವ ವಿಚಾರವಾಗಿ 2024-25ನೇ ಸಾಲಿನ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದರು.
ಮೈಶುಗರ್ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಸರ್ಕಾರದ ಅನುದಾನ, ಇತರೆ ಮೂಲಗಳು ಹಾಗೂ ಕಾರ್ಖಾನೆಯ Asset Monetisation ಮೂಲಕ ಸಂಪನ್ಮೂಲವನ್ನು ಕ್ರೋಢೀಕರಿಸಲಾಗುವುದು ಎಂದು ತಿಳಿಸಿದ್ದರು.
ಮಣ್ಣು ಸಂಗ್ರಹ ಅಭಿಯಾನದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಕೆರಗೋಡು ಹನುಮಧ್ವಜ ವಿವಾದದ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದೆ ಎನ್ನಲಾಗುತ್ತಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮೈ ಶುಗರ್ ಕಾರ್ಖಾನೆ ಅಸ್ತ್ರ ಪ್ರಯೋಗಿಸಿ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಕಾಂಗ್ರೆಸ್ ಹೊಸ ದಾಳ ಉರುಳಿಸಿದೆ.
ಕಾಂಗ್ರೆಸ್ ಶಾಸಕ ರವಿ ಗಣಿಗ ಮೈಶುಗರ್ ಕಾರ್ಖಾನೆಯನ್ನು ರಾಮಮಂದಿರಕ್ಕೆ ಹೋಲಿಕೆ ಮಾಡುವ ಮೂಲಕ ಬಿಜೆಪಿ-ಜೆಡಿಎಸ್ ಗೆ ಕೌಂಟರ್ ಕೊಡಲು ರಣತಂತ್ರ ಹೆಣದಿದ್ದಾರೆ.