ಅಮೀನಗಡ ಪಪಂನಲ್ಲಿ ಸಾಮಾನ್ಯ ಸಭೆ
ನಿಮ್ಮ ಸುದ್ದಿ ಬಾಗಲಕೋಟೆ
ಸದಸ್ಯರಾಗಿ ಆಯ್ಕೆ ಆಗಿ ಬರೋಬ್ಬರಿ ಎರಡೂವರೆ ವರ್ಷದ ನಂತರ ಮೊದಲ ಬಾರಿ ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ ಆಯೋಜಿಸಲಾಗಿತ್ತು.
ನೂತನವಾಗಿ ಸಭೆಗೆ ಆಗಮಿಸಿದ ಎಲ್ಲ ಸದಸ್ಯರನ್ನು ಪಪಂ ಮುಖ್ಯಾಧಿಕಾರಿ ಎಸ್.ಬಿ.ಪಾಟೀಲ ಹಾಗೂ ಸಿಬ್ಬಂದಿ ಸನ್ಮಾನಿಸಿ ಸ್ವಾಗತಿಸಿದರು. ಸದಸ್ಯರಿಗೆ ತಮ್ಮ ಕರ್ತವ್ಯದ ಬಗ್ಗೆ ಪ್ರಮಾಣ ವಚನ ಬೋಧಿಸಲಾಯಿತು.
ಹಲವು ವರ್ಷಗಳಿಂದ ರಾಜ್ಯ ಹೆದ್ದಾರಿಯ ಅಕ್ಕಪಕ್ಕ ನಡೆಯುತ್ತಿರುವ ಸಂತೆಯನ್ನು ನಿಗದಿತ ಜಾಗದಲ್ಲಿ ಸ್ಥಳಾಂತರ ಮಾಡುವ ಕುರಿತಂತೆ ಬಿಸಿಬಿಸಿ ಚರ್ಚೆ ನಡೆಯಿತು. 50 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣವಾಗಿದ್ದು ಹಲವು ಮೂಲ ಸೌಲಭ್ಯದ ಕೊರತೆ ನೆಪವೊಡ್ಡಿ ವ್ಯಾಪಾರಸ್ಥರು ಅಲ್ಲಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ನೂತನ ಜಾಗ ವಾಹನ ಪಾರ್ಕಿಂಗ್ ತಾಣವಾಗಿದೆ. ರಾಜ್ಯ ಹೆದ್ದಾರಿ ಅಕ್ಕಪಕ್ಕ ಹಾಗೂ ನಾಡಕಚೇರಿ ಆವರಣದಲ್ಲಿ ನಡೆಯುತ್ತಿರುವ ಸಂತೆ ಮಾರುಕಟ್ಟೆಯನ್ನು ಸ್ಥಳಾಂತರಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.
ಮುಖ್ಯಾಧಿಕಾರಿ ಎಸ್.ಬಿ.ಪಾಟೀಲ ಹಾಗೂ ಪಿಎಸ್‌ಐ ಜ್ಯೋತಿ ವಾಲಿಕಾರ, ಸಂತೆ ಸ್ಥಳಾಂತರ ಕುರಿತಂತೆ ಸಭೆ ನಡೆಸಲಾಗುವುದು. ರಾಜ್ಯ ಹೆದ್ದಾರಿಗುಂಟ ನಡೆಯುವ ವ್ಯಾಪಾರ ತಡೆಯುವ ಮೂಲಕ ಅಪಘಾತವನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಬೇಕು ಎಂದರು. ಇದೇ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಸ್ಥರಿಂದ ಮಾರುಕಟ್ಟೆ ಜಾಗದಲ್ಲಿ ಸೌಲಭ್ಯಕ್ಕಾಗಿ ಮನವಿ ಸಲ್ಲಿಸಲಾಯಿತು.
ಕೆಲ ಲಿಲಾವುದಾರರು ಹಲವು ವರ್ಷದಿಂದ ಪಪಂಗೆ ಬರಬೇಕಾದ ಹಣ ಭರಣ ಮಾಡಿಲ್ಲ. ಅಂತವರಿಗೆ ಅಂತಿಮ ನೋಟಿಸ್ ನೀಡಿ. ಹಣ ತುಂಬದಿದ್ದರೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸದಸ್ಯರು ಒತ್ತಾಯಿಸಿದರು. 2024-25ನೇ ಸಾಲಿನ 15ನೇ ಹಣಕಾಸು ಯೋಜನೆ, ಎಸ್‌ಎಫ್‌ಸಿ ಯೋಜನೆಯ ಟೆಂಡರ್ ಮಂಜೂರಾತಿ ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚೆ ನಡೆಯಿತು.
ಪಪಂ ಅಧ್ಯಕ್ಷೆ ಬಿ.ಆರ್.ಚೌಹಾಣ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಉಮಾಶ್ರೀ ಹಣಗಿ, ಬಾಬು ಛಬ್ಬಿ, ವಿದ್ಯಾ ರಾಮವಾಡಗಿ, ರಾಘವೇಂದ್ರ ಮುಳ್ಳೂರ, ಗಣೇಶ ಚಿತ್ರಗಾರ, ಫಾತಿಮಾ ಅತ್ತಾರ, ರಮೇಶ ಮುರಾಳ, ಸಂತೋಷ ಐಹೊಳ್ಳಿ, ಸಂತೋಷ ಕಂಗಳ, ಶ್ರೀದೇವಿ ನಿಡಗುಂದಿ, ಸುಜಾತಾ ತತ್ರಾಣಿ, ಬಸವರಾಜ ಬೇವೂರ, ಸಂಜಯ ಐಹೊಳ್ಳಿ, ತುಕಾರಾಮ ಲಮಾಣಿ, ವಿಜಯಕುಮಾರ ಕನ್ನೂರ, ನಾಮ ನಿರ್ದೇಶಿತ ಸದಸ್ಯರಾದ ಕಸ್ತೂರಿ ಚಳ್ಳಗಿಡದ, ಯಮನಪ್ಪ ನಾಗರಾಳ, ಜೆಇ ನವೀದ ಖಾಜಿ, ಜೆಎಚ್‌ಐ ಸಂತೋಷ ವ್ಯಾಪಾರಿಮಠ, ರಮೇಶ ಕಡ್ಲಿಮಟ್ಟಿ ಹಾಗೂ ಸಿಬ್ಬಂದಿ ಇದ್ದರು.