ವೈದ್ಯಕೀಯ ಕಾಲೇಜ್ ಆರಂಭಕ್ಕಾಗಿ ಜನಜಾಗೃತಿ
ನಿಮ್ಮ ಸುದ್ದಿ ಬಾಗಲಕೋಟೆ
೨೦೧೪-೧೫ರಲ್ಲಿಯೇ ಬಾಗಲಕೋಟೆ ಜಿಲ್ಲಾ ಕೇಂದ್ರಕ್ಕೆ ಘೋಷಣೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ರಾಜ್ಯ ಸರ್ಕಾರ ಸೂಕ್ತ ಅನುದಾನ ಒದಗಿಸುವಂತೆ ಒತ್ತಾಯಿಸಿ ಏ.೬ರಂದು ನಗರದಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ನೇತೃತ್ವದಲ್ಲಿ ಬೃಹತ್ ಜನಾಂದೋಲನ ಸಭೆ ಜರುಗಲಿದೆ.
ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಮೇಶ ಬದ್ನೂರ್, ಬಾಗಲಕೋಟೆಗೆ ವೈದ್ಯಕೀಯ ಕಾಲೇಜು ಆರಂಭವಾಗಬೇಕೆAಬ ಹೋರಾಟವನ್ನು ಕರವೇ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಮಾಡುತ್ತಿದೆ. ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಗಮನ ಸೆಳೆಯಲು ಏ.೬ರಂದು ಬೃಹತ್ ಜನಾಂದೋಲನ ಆಯೋಜಿಸಲಾಗಿದೆ.
ನಗರದ ಬಸವೇಶ್ವರ ವೃತ್ತದಲ್ಲಿ ಈ ಸಮಾವೇಶ ನಡೆಯಲಿದೆ. ಮಧ್ಯಾಹ್ನ ೧೨ಕ್ಕೆ ಜನಾಂದೋಲನದ ಮೂಲಕ ಸರಕಾರ ಹಾಗೂ ಜನಪ್ರತಿನಿಧಿಗಳಿಗೆ ಹಕ್ಕೊತ್ತಾಯ ಮಂಡಿಸಲಾಗುವುದು. ಜನಜಾಗೃತಿಗಾಗಿ ಕಳೆದೊಂದು ತಿಂಗಳಿನಿAದ ಹಲವು ಸಭೆಗಳನ್ನು ನಡೆಸಿದ್ದು ಅಂದು ನಡೆಯಲಿರುವ ಸಮಾವೇಶದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು, ರಾಜಕೀಯ ಮುಖಂಡರು, ನಗರದ ಹಿತೈಷಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ವೇದಿಕೆಯಿಂದ ಕಾಲೇಜ್ ಸ್ಥಾಪನೆಗೆ ಒತ್ತಾಯಿಸಿ ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಸಂಸದರು, ಸಚಿವರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ೨೫ ಸಾವಿರಕ್ಕೂ ಹೆಚ್ಚು ಜನರು ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಆನ್‌ಲೈನ್ ಅಭಿಪ್ರಾಯವನ್ನೂ ಸಂಗ್ರಹಿಸಲಾಗಿದೆ. ೨,೨೩೪ ಜನರಲ್ಲಿ ೨,೧೭೪ ಜನರು ಕಾಲೇಜ್ ಸ್ಥಾಪನೆಗೆ ಬೇಡಿಕೆ ಇಟ್ಟಿದ್ದಾರೆ ಎಂದರು.
ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ವೈದ್ಯಕೀಯ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರದ ಯೋಜನೆಯಡಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಿಲು ಅವಕಾಶವಿದ್ದಿದ್ದರಿಂದಲೇ ೨೦೧೪-೧೫ರಲ್ಲಿ ಘೋಷಣೆಯಾದ ಕಾಲೇಜನ್ನು ಈವರೆಗೆ ಆರಂಭಿಸಲು ನಿರಾಸಕ್ತಿ ತೋರಿರುವ ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಅನುದಾನ ದೊರಕಿಲ್ಲ. ಜಿಲ್ಲೆಯ ಜನತೆಯ ಕನಸಾಗಿರುವ ವೈದ್ಯಕೀಯ ಮಹಾವಿದ್ಯಾಲಯದ ಸ್ಥಾಪನೆಗೆ ಕರವೇ ನಿರಂತರ ಪ್ರಯತ್ನ ಮುಂದುವರೆಸಲಿದೆ ಎಂದರು.
ಕಾಲೇಜ್ ಸ್ಥಾಪನೆಯಾದರೆ ಜಿಲ್ಲೆಯ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ವಿವಿಧ ತಜ್ಞ ವೈದ್ಯರ ಕೊರತೆ ನೀಗುತ್ತದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸೃಷ್ಠಿಯಾಗುತ್ತದೆ. ಆದರೆ ರಾಜಕಾರಣಿಗಳು ಈ ವಿಷಯದ ಬಗ್ಗೆ ಪಕ್ಷಾತೀತವಾಗಿ ನಿರ್ಲಕ್ಷ ವಹಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರವೇ ಪದಾಧಿಕಾರಿಗಳಾದ ಬಸವರಾಜ ಧರ್ಮಂತಿ, ಆತ್ಮಾರಾಮ ನೀಲನಾಯಕ, ಮಲ್ಲು ಕಟ್ಟಿಮನಿ ಇತರರು ಇದ್ದರು.