ಬಾಗಲಕೋಟೆ
ಸ್ವಾಮಿ ವಿವೇಕಾನಂದರ ತ್ಯಾಗ ಮತ್ತು ಸಾಧನೆ ಯುವಕರಿಗೆ ಆದರ್ಶವಾಗಿದ್ದು ಇಂದಿನ ಯುವಶಕ್ತಿಗೆ ಸಂಶೋಧನಾತ್ಮಕ ಜ್ಞಾನದ ಹಸಿವು ಮುಖ್ಯವಾಗಬೇಕು ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ವಿದ್ಯಾಗಿರಿಯಲ್ಲಿನ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜ್‌ನ ನೂತನ ಸಭಾಭವನದಲ್ಲ್ಲಿ ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಬಸವೇಶ್ವರ ಎಂಜಿನಿಯರಿಂಗ್ ಕಾಲೇಜ್ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ನಡೆದ ಸ್ವಾಮಿ ವಿವೇಕಾನಂದರ ೧೬೧ನೇ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಭಾರತದ ಧಾರ್ಮಿಕತೆಯ ಅಸ್ಮಿತೆಯ ಪ್ರತೀಕವಾಗಿದ್ದಾರೆ. ಕಡಿಮೆ ವಯಸ್ಸಲ್ಲೇ ಜಗತ್ತೇ ಮೆಚ್ಚುವ ಸಾಧನೆ ಮೂಲಕ ಪ್ರಪಂಚದಲ್ಲಿ ಇಂದಿಗೂ ಜೀವಂತವಾಗಿರುವ ಜ್ಞಾನದ ಮೇರು ಪರ್ವತ ತೋರಿಸುತ್ತದೆ ಎಂದರು.
ಭಾರತದ ಯುವ ಜನತೆಗೆ ಅವರ ತ್ಯಾಗ ಮತ್ತು ಸಾಧನೆ ಆದರ್ಶವಾಗಿದ್ದು, ಯುವ ಜನಾಂಗ ಸಂಶೋಧನಾತ್ಮಕ ಜ್ಞಾನ ಹಸಿವು ಮೈಗೂಡಿಸಿಕೊಳ್ಳಬೇಕು, ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಮುಂದಿನ ದಿನಗಳಲ್ಲಿ ಭಾರತ ವಿಶ್ವದ ಆರ್ಥಿಕತೆ ಪಟ್ಟಿಯಲ್ಲಿ ೩ನೇ ಸ್ಥಾನಕ್ಕೆರುವುದಿದೆ. ಅಲ್ಲದೆ ಭಾರತ ಧಾರ್ಮಿಕ, ಸಾಂಸ್ಕೃತಿಕವಾಗಿ ಜಗತ್ತಿಗೆ ಶ್ರೀಮಂತವಾಗಿದ್ದು ಭಾರತವನ್ನು ಜಗದ್ಗುರುವನ್ನಾಗಿಸಲು ಎಲ್ಲರೂ ಕಾರ್ಯಮಗ್ನರಾಗೋಣ ಎಂದು ಹೇಳಿದರು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಮುಖ್ಯವಾಗಿದ್ದು. ನಮ್ಮನ್ನು ನಾವು ಸ್ವಯಂ ಪ್ರೇರಣೆಯಿಂದ ದೇಶದ ಪ್ರಗತಿಯಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಿದರು.
ಅಪಘಾತ ತಡೆ ಕುರಿತು ಡಾ.ಅಶ್ವಿನಿ ಪಾಟೀಲ ಉಪನ್ಯಾಸ ನೀಡಿದರು. ನೆಹರು ಯುವ ಕೇಂದ್ರ ಲೆಕ್ಕ ಹಾಗೂ ಕಾರ್ಯಕ್ರಮ ಅಕಾರಿ ಆರ್.ಎ.ಬಿರಾದಾರ ಮಾತನಾಡಿದರು. ಪ್ರಾಚಾರ್ಯೆ ಡಾ.ಡಿ.ಎಸ್.ಜಂಗಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎನ್ನೆಸ್ಸೆಸ್ ನೋಡಲ್ ಅಕಾರಿ ಮಾರುತಿ ಪಾಟೋಳಿ ಇತರರಿದ್ದರು.