ಬೆಂಗಳೂರು: ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಂಚನೆ ಪ್ರಕರಣಗಳು, ಸೈಬರ್ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಪೊಲೀಸ್ ಇಲಾಖೆ ಎಷ್ಟೇ ಕ್ರಮ ವಹಿಸಿದರೂ ವಂಚನೆ ಪ್ರಕರಣಗಳಿಗೆ ಬ್ರೇಕ್ ಬೀಳುತ್ತಿಲ್ಲ. ಗೃಹ ಸಾಲ ಕ್ಲಿಯರ್ ಮಾಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 47 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ನಿರ್ವಿಕ್ ರಾಧೇಶ್ಯಾಮ್ ಮತ್ತು ಗೌರವ್ ಅರೋರ ಎಂಬವರು 47 ಲಕ್ಷ ರೂಪಾಯಿ ವಂಚಿಸಿದ್ದಾಗಿ ಆರೋಪಿಸಿ ಸಂಜಯ್ ಎಂಬುವರು ಕೇಂದ್ರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, FIR ದಾಖಲಿಸಿದ ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದು, ಬ್ಯಾಂಕ್ ಮೂಲಕ ಸಂಜಯ್ ಗೃಹ ಸಾಲ ತೆಗೆದುಕೊಂಡಿದ್ದರು. ಈ ವಿಚಾರ ತಿಳಿದ ಮ್ಯೂಚುಯಲ್ ಫ್ರೆಂಡ್ ನಿರ್ವಿಕ್ ರಾಧೆ ಶ್ಯಾಮ್, ತನಗೆ ಬ್ಯಾಂಕ್ನ ಹಿರಿಯ ಅಧಿಕಾರಿಗಳು ಪರಿಚಯ ಇದ್ದಾರೆ.
ಬ್ಯಾಂಕ್ ಲೋನ್ ಸೆಟಲ್ಮೆಂಟ್ ಮಾಡಿಸುವುದಾಗಿ ನಂಬಿಸಿ ಗೌರವ್ ಅರೋರ ಎಂಬಾತನನ್ನ ಬ್ಯಾಕ್ನ ಲೀಗಲ್ ಲಾಯರ್ ಎಂದು ಪರಿಚಯಿಸಿದ್ದು, ಲೀಗಲ್ ಫೀಸ್ ಅಂತ ಸಂಜಯ್ ಅವರಿಂದ 3.50 ಲಕ್ಷ ರೂ. ಪಡೆದಿದ್ದ ಆರೋಪಿಗಳು, ಬಳಿಕ ಮುಂಬೈಗೆ ಕರೆಸಿಕೊಂಡು ಸೆಟಲ್ ಮೆಂಟ್ ಬಗ್ಗೆ ಮಾತುಕತೆ ನಡೆಸಿದ್ದು, ಸಂಜಯ್ ಬ್ಯಾಂಕ್ಗೆ ಮರುಪಾವತಿಸಬೇಕಾದ ಹಣವನ್ನು ಗೌರವ್ ಅಕೌಂಟ್ಗೆ ಪಾವತಿಸಲು ನಿರ್ವಿಕ್ ಹೇಳಿದ್ದ. ಅದರಂತೆ 47.50 ಲಕ್ಷ ರೂ. ಅನ್ನು ಗೌರವ್ ಅರೋರ ಖಾತೆಗೆ ಪಾವತಿಸಿದ್ದಾರೆ.
ಬಳಿಕ ನಿರ್ವಿಕ್ ಮತ್ತು ಗೌರವ್ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದು, ಬಳಿಕ ತಾನು ವಂಚನೆಗೆ ಸಿಲುಕಿರುವುದು ಖಚಿತವಾಗುತ್ತಿದ್ದಂತೆ ಸಂಜಯ್, ಕೇಂದ್ರ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದು, ನಿರ್ವಿಕ್ ಮತ್ತು ಗೌರವ್ ಎಂಬವರು ಸುಳ್ಳು ಹೇಳಿ ವಂಚಿಸಿರುವುದಾಗಿ ಸಂಜಯ್ ದೂರಿನಲ್ಲಿ ಆರೋಪಿಸಿದ್ದು, ಬೆಳಕಿಗೆ ಬಂದಿದೆ.