ಬೆಂಗಳೂರು: ತಮ್ಮ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು ಬೆಳಕಿಗೆ ಬಂದಿದೆ.
ಅವರು ಹೇಳುವ ಪ್ರಕಾರ ಸುಮಾರು ಒಂದೂವರೆ ತಿಂಗಳು ಹಿಂದೆ ಒಬ್ಬ ತಾಯಿ ಮತ್ತು ಮಗಳು ಅವರನ್ನು ಕಾಣಲು ಬಂದಿದ್ದು ನಿಜ. ಅದಕ್ಕೂ ಮೊದಲು ಸಹ ಅವರಿಬ್ಬರು ಬಿಎಸ್ ವೈ ಮನೆ ಬಳಿ ಕಾಣಿದ್ದರಂತೆ. ಆದರೆ ಈ ಬಾರಿ ಅವರು ಕಣ್ಣೀರು ಹಾಕುತ್ತಿದ್ದುದ್ದರಿಂದ ಒಳಗೆ ಕರೆಸಿ ಯಡಿಯೂರಪ್ಪ ವಿಚಾರಿಸಿದಾಗ ಅವರು ಹಲವಾರು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
ಆಗ ಮಾಜಿ ಮುಖ್ಯಮಂತ್ರಿಯವರು, ನಗರ ಪೊಲೀಸ್ ಕಮೀಶನರ್ ಬಿ ದಯಾನಂದ ಅವರಿಗೆ ಪೋನ್ ಮಾಡಿ ಮಹಿಳೆ ಮತ್ತು ಆಕೆಯ ಮಗಳಿಗೆ ಸಹಾಯ ಮಾಡಿ ಎಂದು ಹೇಳಿದ್ದರು. ತುಂಬಾ ಕಷ್ಟದಲ್ಲಿರುವುದಾಗಿ ಹೇಳಿಕೊಂಡಿದ್ದರಿಂದ ಯಡಿಯೂರಪ್ಪ ಒಂದಷ್ಟು ದುಡ್ಡನ್ನು ಸಹ ತಾಯಿ-ಮಗಳಿಗೆ ಕೊಟ್ಟು ಕಳಿಸಿದರಂತೆ. ಈಗ ನೋಡಿದರೆ ಆಕೆ ತನ್ನ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ ಎಂದು ನಗುತ್ತಾ ಹೇಳಿದ ಬಿಎಸ್ ಯಡಿಯೂರಪ್ಪ, ಕಾನೂನು ಅಡಿಯಲ್ಲಿ ಪ್ರಕರಣವನ್ನು ಎದುರಿಸುವುದಾಗಿ ಹೇಳಿದರು.
ಗಮನಿಸಬೇಕಾದ ಸಂಗತಿಯೆಂದರೆ ಯಡಿಯೂರಪ್ಪ ಇದನ್ನು ಕಾಂಗ್ರೆಸ್ ಅಥವಾ ತಮ್ಮ ವೈರಿಗಳ ಕುತಂತ್ರ ಅಂತ ಹೇಳಲಿಲ್ಲ ಎಂದು ಮಾಹಿತಿ ಕಂಡು ಬಂದಿದೆ.