ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿನ ಬಂಜಾರಾ ಸಮುದಾಯದಿಂದ ಆಚರಿಸಲ್ಪಡುವ ಹೋಳಿ ಸಂಪ್ರದಾಯ ತನ್ನದೆ ಆದ ವಿಶಿಷ್ಠತೆ ಹೊಂದಿದೆ.
ಪ್ರತಿ ವರ್ಷ ಹೋಳಿ ಹಬ್ಬದ ನಿಮಿತ್ತ ಪಟ್ಟಣದಲ್ಲೆಲ್ಲ ಕಾಮದಹನ, ಸೋಗಿನ ವ್ಯವಸ್ಥೆ ಮೂಲಕ ಹಬ್ಬ ಆಚರಿಸಿದರೆ ಇಲ್ಲಿನ ಬಂಜಾರಾ ಸಮುದಾಯ ತಮ್ಮೊಳಗೆ ಹಲವು ಸಂಪ್ರದಾಯಗಳನ್ನು ಆಚರಿಸಿಕೊಂಡು ಬರುತ್ತಿದೆ.
ಹೋಳಿ ಹುಣ್ಣಿಮೆ ಮರುದಿನ ಬಂಜಾರಾ ಸಮುದಾಯ ಹಿರಿಯರು, ಕಿರಿಯರು, ಯುವಕರು ಸೇರಿಕೊಂಡು ಬೆಳಗ್ಗೆ ೬.೩೦ರೊಳಗೆ ಕಾಮದಹನ ಮಾಡುವುದು ಇಲ್ಲಿನ ವಿಶೇಷವಾಗಿದೆ. ಕಾಮದಹನದ ನಂತರ ತಾಂಡಾದ ಹಿರಿಯರು, ಯುವಕರು ಸೇರಿ ತಮ್ಮ ಸಮುದಾಯ ಬಾಂಧವರ ಮನೆಗೆ ತೆರಳಿ ಕಾಮದಹನದ ಬೂದಿಯನ್ನು ಪರಸ್ಪರ ಹಣೆಗೆ ಹಚ್ಚಿ ಶುಭ ಕೋರುವುದಲ್ಲದೆ ಕಿರಿಯರು ಹಿರಿಯರ ಆರ್ಶೀರ್ವಾದ ಪಡೆಯುತ್ತಾರೆ.
ಕಳೆದ ವರ್ಷದ ಹೋಳಿ ನಂತರ ಸಮುದಾಯದ ಯಾರ ಮನೆಯಲ್ಲಿ ಗಂಡು ಮಗು ಜನಿಸಿರುತ್ತದೆಯೋ ಅಂತವರ ಮನೆ ಮುಂದೆ ಸಿಹಿ ಖಾದ್ಯ ತುಂಬಿದ ಪಾತ್ರೆೆಯೊಂದನ್ನು ಹೂತಿಡುತ್ತಾರೆ. ಎಲ್ಲರೂ ಸೇರಿಕೊಂಡ ಆ ಪಾತ್ರೆಯನ್ನು ಹೊರಗೆ ತೆಗೆಯುವುದು, ಅದನ್ನು ತಪ್ಪಿಸಲು ಮತ್ತೊಂದು ತಂಡ ಸಜ್ಜಾಗಿರುವುದು ಹೀಗೆ ಮೋಜು, ಸಂಭ್ರಮದೊಂದಿಗೆ ಈ ಕಾರ್ಯಕ್ರಮ ನಡೆಯುತ್ತದೆ. ಪಾತ್ರೆ ಹೊರ ತೆಗೆದ ನಂತರ ಎಲ್ಲರೂ ಸೇರಿಕೊಂಡು ಊಟ ಮಾಡುತ್ತಾರೆ.
ಹೀಗೆ ವಿಶಿಷ್ಠವಾಗಿ ನಡೆದ ಹೋಳಿ ಆಚರಣೆಯಲ್ಲಿ ಹಿರಿಯರಾದ ಶಂಕ್ರಪ್ಪ ರಾಠೋಡ, ಶಂಕ್ರಪ್ಪ ನಾಯಕ, ಗಿರೀಶ ನಾಯಕ, ಮುದಿಯಪ್ಪ ಲಮಾಣಿ, ಯೋಗೇಶ ಲಮಾಣಿ, ಗಿರೀಶ ರಾಠೋಡ, ರವಿ ರಾಠೋಡ, ವಾಸು ರಾಠೋಡ, ಪರಶು ರಾಠೋಡ, ಅಶೋಕ ರಾಠೋಡ ಇತರರು ಇದ್ದರು.
ಮತ್ತೊಂದು ವಿಶೇಷವೆಂದರೆ ತಾಂಡಾದಲ್ಲಿ ನಡೆಯುವ ಬಣ್ಣದಾಟ ಅಲ್ಲಿನ ಸಮುದಾಯ ಬಾಂಧವರಿಗೆ ಮೀಸಲಾಗಿರುತ್ತದೆಯೇ ಪಟ್ಟಣದ ಜನತೆಗೆ ಯಾವುದೇ ತೊಂದರೆ ಆಗುವುದಿಲ್ಲ.
ಫೋಟೊ ೩೦ಎಎಂಡಿ೨
ಅಮೀನಗಡದ ಬಂಜಾರಾ ಸಮುದಾಯ ಬಾಂಧವರು ವಿಶಿಷ್ಠವಾಗಿ ಹೋಳಿ ಆಚರಣೆ ನಡೆಸಿದರು.