ದೇವರಹಿಪ್ಪರಗಿ: 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಒಡನಾಡಿ, ವಚನಕಾರ, ಶರಣ ಮಡಿವಾಳ ಮಾಚಿದೇವ ಅವರ ದೇವರಹಿಪ್ಪರಗಿಯ ಜನ್ಮಸ್ಥಳದಲ್ಲಿ ಅಭಿವೃದ್ಧಿ ಗೌಣವಾಗಿದ್ದು, ಇಡೀ ಜಿಲ್ಲೆಗೆ ದೇವರಹಿಪ್ಪರಗಿ ಮಧ್ಯವರ್ತಿ ಕೇಂದ್ರ ಸ್ಥಳವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಸರಕಾರ ಮಾಚಿದೇವರ ಪಾವನ ಕ್ಷೇತ್ರ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿಸಬೇಕಿದ್ದು, ದೇವರಹಿಪ್ಪರಗಿಯ ರಾಷ್ಟ್ರೀಯ ಹೆದ್ದಾರಿ-50ರ ಪಕ್ಕದಲ್ಲಿರುವ 12ನೇ ಶತಮಾನದ ಶರಣ ಮಡಿವಾಳ ಮಾಚಿದೇವ ದೇವಸ್ಥಾನ ಅಭಿವೃದ್ಧಿಗಾಗಿ ಹಾತೊರೆಯುತ್ತಿದ್ದು, ಪ್ರವಾಸೋದ್ಯಮ ಇಲಾಖೆ ಮನಸ್ಸು ಮಾಡಿದರೆ ಜಿಲ್ಲೆಯೊಳಗೊಂದು ಉತ್ತಮ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ ಎನ್ನಬಹುದು.
2017 ರಲ್ಲಿ ಅಂದಿನ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹಾಗೂ ನಾಡೋಜ ಗೋ.ರು. ಚನ್ನಬಸಪ್ಪ ಅವರ ಪ್ರಯತ್ನದಿಂದಾಗಿ 3.20 ಕೋಟಿ ರೂ. ವೆಚ್ಚದ ನೂತನ ದೇವಸ್ಥಾನದ ಕಟ್ಟಡಕ್ಕೆ 2017, ಅಕ್ಟೋಬರ್ 27 ರಂದು ಭೂಮಿಪೂಜೆ ನೆರವೇರಿಸಿ ಗರ್ಭಗುಡಿ, ಭವ್ಯ ಗೋಪುರ ದ್ವಾರದೊಂದಿಗೆ ದೇವಾಲಯ ನಿರ್ಮಿಸಲಾಯಿತು.
ಇದೇ ಸಮಯದಲ್ಲಿ ನಿರ್ಮಾಣವಾಗಬೇಕಾಗಿದ್ದ ವಚನಗಳನ್ನು ಒಳಗೊಂಡ ಶಿಲಾಫಲಕಗಳ ಸ್ಮಾರಕ ಮಾತ್ರ ಆಗಲೇ ಇಲ್ಲ.ಸಾಕಷ್ಟು ಸ್ಥಳಾವಕಾಶ, ಸಾರಿಗೆ ಸಂಪರ್ಕ, ಉತ್ತಮ ವಾತಾವರಣ ಹೊಂದಿದರೂ, ಇಚ್ಛಾಶಕ್ತಿಯ ಕೊರತೆಯಿಂದ ಇಲ್ಲಿಯವರೆಗೆ ಪ್ರವಾಸಿ ತಾಣವಾಗಿಲ್ಲಎಂಬ ಕೊರಗು ಮಡಿವಾಳ ಮಾಚಿದೇವರ ಭಕ್ತಾಧಿಗಳಲ್ಲಿ ಕಾಡುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.