ಬಾಗಲಕೋಟೆ:
ಇಂದಿಗೂ ಕೂಡ ವಿವಿಧ ರೀತಿಯ ಜೀತ ಪದ್ದತಿ ಕಾಣಬಹುದಾಗಿದ್ದು, ಕಾರ್ಯಕರ್ತರು, ಜನ ಸಹಕಾರ ನೀಡಿದಲ್ಲಿ ಜೀತ ಪದ್ದತಿ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯತ್ ಹಳೆಯ ಸಭಾಂಗಣದಲ್ಲಿ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಒತ್ತಾಯ ಪೂರ್ವಕವಾಗಿ ಕೆಲಸಕ್ಕೆ ಇಟ್ಟುಕೊಳ್ಳುವುದು ಜೀತ ಪದ್ದತಿಯಾಗಿರುತ್ತದೆ. ಇಂತಹ ಹಿನಾಯ ಸ್ಥಿಯಲ್ಲಿರುವ ವ್ಯಕ್ತಿ, ಕಾರ್ಮಿಕರು ಕಂಡು ಬಂದಲ್ಲಿ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಬೇಕು. ಆರೋಗ್ಯಕರ ಸಮಾಜ ನಿರ್ಮಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪಾ ಎಸ್.ಬಿ ಮಾತನಾಡಿ, ಒಬ್ಬ ವ್ಯಕ್ತಿ ಇನ್ನೊಬ್ಬನ ಅಡಿ ಆಳಾಗಿ ದುಡಿಯುತ್ತಾ ಬದುಕುವುದೇ ಜೀತ ಪದ್ದತಿ.. ಉಳ್ಳವರ ಹತ್ತಿರ ಸಾಲ ಮಾಡಿ ಜೀತದಾಳುಗಳಾಗುವುದು ಬೇಡ. ವಿವಿಧ ಯೋಜನೆಯಡಿ ದೊರೆಯುವ ಸಾಲ ಸೌಲಭ್ಯ ಪಡೆದು ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಮಾತನಾಡಿ ೧೯೭೬ ರ ಫೆ. ೯ ರಂದು ದೇಶದಲ್ಲಿ ಜೀತ ಪದ್ದತಿ(ರದ್ದತಿ) ನಿರ್ಮೂಲನೆ ಕಾಯಿದೆಯನ್ನು ಜಾರಿಗೆ ತರಲಾಯಿತು. ಆಗ ದೇಶವು ೩ ಲಕ್ಷ ೧೫ ಸಾವಿರ ಜೀತ ಕಾರ್ಮಿಕರನ್ನು ಹೊಂದಿತ್ತು. ಈ ಪೈಕಿ ಶೇ. ೮೪ ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೇ ಇದ್ದಿದ್ದು ವಿಷಾಧನೀಯ. ವಿಷಯ ಅತೀ ಹೆಚ್ಚು ಜೀತಕಾರ್ಮಿಕ ಪ್ರಕರಣಗಳು ಕಂಡು ಬಂದ ರಾಜ್ಯಗಳಲಿ ಕರ್ನಾಟಕವು ಒಂದಾಗಿತ್ತು. ಈ ಹಿನ್ನಲೆಯಲ್ಲಿ ಪ್ರತಿ ವರ್ಷ ಫೆ. ೯ ರಂದು ಜೀತಕಾರ್ಮಿಕ ಪದ್ದತಿ ನಿರ್ಮೂಲನಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಕಾರ್ಮಿಕ ವರ್ಗದವರು ಸರಕಾರದ ವಿವಿಧ ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಾನಕಿ ಕೆ ಎಮ್ ಮಾತನಾಡಿ ಅಸಮಾನತೆ ಇದ್ದಾಗ ಜೀತ ಪದ್ದತಿ ಹುಟ್ಟುಕೊಳ್ಳುತ್ತದೆ. ಸಾಮಾಜಿಕ ವ್ಯವಸ್ಥೆ ಕೂಡ ಜೀತ ಪದ್ದತಿಗೆ ಸಹಕಾರ ನೀಡಿದಂತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಇದಕ್ಕೆ ಗುರಿಯಾಗಿದ್ದು ದುರಂತವೇ ಸರಿ. ಇಂದಿಗೂ ವಿವಿಧ ರೂಪದಲ್ಲಿ ಜೀತ ಪದ್ದತಿ ಮುಂದುವರೆದಿದ್ದು, ಇದನ್ನು ತಡೆಯುವುದು ಎಲ್ಲರ ಜವಾಬ್ದಾರಿ ಎಂದು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಪೂಜಾರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ್ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಸೇರಿದಂತೆ ಇತರರು ಇದ್ದರು.