ಅಯೋಧ್ಯಾ: ಅಯೋಧ್ಯಾದ ರಾಮ ಮಂದಿರದ ಪ್ರಧಾನ ಅರ್ಚಕರ ಮನವಿ ಮೇರೆಗೆ, ಬಾಲ ರಾಮನಿಗೆ ಮಧ್ಯಾಹ್ನದ ವೇಳೆಗೆ ಒಂದು ಗಂಟೆ ‘ವಿಶ್ರಾಂತಿ’ ನೀಡುವ ಕ್ರಮ ಶುಕ್ರವಾರದಿಂದ ಜಾರಿಗೆ ಬರಲಿದೆ ಎಂದು ಮಾಹಿತಿ ತಿಳಿದು ಬಂದಿದೆ.
ರಾಮ ಲಲ್ಲಾನ ಯೋಗ ಕ್ಷೇಮದ ದೃಷ್ಟಿಯಿಂದ ಈ ಹೊಸ ವೇಳಾಪಟ್ಟಿ ಅಳವಡಿಸಲಾಗುತ್ತಿದೆ ಎಂದು ವರದಿಯಾಗಿದ್ದು, ರಾಮ ಲಲ್ಲಾ ದೇವರು ಐದು ವರ್ಷದ ಮಗುವಾಗಿದ್ದು, ಅದಕ್ಕೆ ಹೆಚ್ಚಿನ ಒತ್ತಡ ನೀಡುವುದು ಸಾಧ್ಯವಿಲ್ಲ ಎಂದು ಪ್ರಧಾನ ಅರ್ಚಕರು ತಿಳಿಸಿದರು.
ರಾಮ ಮಂದಿರದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಬಳಿಕ, ಭಕ್ತರ ಹರಿವನ್ನು ಗಮನದಲ್ಲಿ ಇರಿಸಿಕೊಂಡು ದರ್ಶನದ ಸಮಯ ದೇವಸ್ಥಾನ ಟ್ರಸ್ಟ್ ಬೆಳಿಗ್ಗೆ 6 ರಿಂದ ಸಂಜೆ 10ರವರೆಗೆ ವಿಸ್ತರಿಸಿದ್ದು, ಜನವರಿ 23ರಿಂದಲೂ ಬೆಳಗಿನ ಜಾವ 4 ಗಂಟೆಯಿಂದಲೇ ದೇವರ ವಿಗ್ರಹದ ಪೂಜಾ ಆಚರಣೆಗಳು ಆರಂಭವಾಗುತ್ತಿದೆ.
ಸುಮಾರು ಎರಡು ಗಂಟೆಗಳ ಕಾಲ ಈ ವಿಧಾನಗಳು ನಡೆಯುತ್ತಿದ್ದು, ಬಳಿಕ 6 ಗಂಟೆಯಿಂದ ಭಕ್ತರ ದರ್ಶನಕ್ಕೆ ಗರ್ಭಗುಡಿ ತೆರೆದುಕೊಳ್ಳುತ್ತಿದ್ದು, ರಾತ್ರಿ 10 ಗಂಟೆಯವರೆಗೂ ಅದು ಮುಂದುವರಿಯುತ್ತದೆ. ಅದರ ನಂತರ ಕೂಡ ಎರಡು ಗಂಟೆ ಪೂಜಾ ಆಚರಣೆ ಇರುತ್ತದೆ.