ಹಾಸನ: ಅಶ್ಲೀಲ ವಿಡಿಯೋಗಳ ಪೆನ್ಡ್ರೈವ್ ಹಂಚಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಿಂದ ಪಾರಾಗಲು ನಾಲ್ವರು ಆರೋಪಿಗಳು ಹೈಕೋರ್ಟ್ ಮೊರೆಹೋಗಿದ್ದಾರೆ. ಸದ್ಯ ಪ್ರಕರಣದಲ್ಲಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದು, ನಿರೀಕ್ಷಣಾ ಜಾಮೀನು ಕೋರಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಹಾಸನದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೇ 8ರಂದು ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿತ್ತು. ಈ ಹಿನ್ನೆಲೆ ನಾಲ್ವರು ಆರೋಪಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ತಕರಾರು ಅರ್ಜಿ ಸಲ್ಲಿಸಲು ಪೊಲೀಸರಿಗೆ ಸೂಚನೆ ನೀಡಿ ಮೇ 28ಕ್ಕೆ ಹೈಕೋರ್ಟ್ ವಿಚಾರಣೆ ಮುಂದೂಡಿದೆ.
ಏ.23ರಂದು ಜೆಡಿಎಸ್ ಚುನಾವಣಾ ಏಜೆಂಟ್ ಪೂರ್ಣಚಂದ್ರ ದೂರು ನೀಡಿದ್ದರು. ನವೀನ್ ಗೌಡ, ಪುಟ್ಟರಾಜ್, ಚೇತನ್, ಕಾರ್ತಿಕ್, ಶರತ್ ವಿರುದ್ಧ ಹಾಸನದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಎಸ್ಐಟಿ ವಿಚಾರಣೆ ಹಿನ್ನೆಲೆಯಲ್ಲಿ ಪ್ರಕರಣ ಎಸ್ಐಟಿಗೆ ಹಸ್ತಾಂತರ ಮಾಡಲಾಗಿತ್ತು. ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡರೂ ಆರೋಪಿಗಳ ಬಂಧನಕ್ಕೆ ಎಸ್ಐಟಿ ಪೊಲೀಸರು ಮುಂದಾಗಿರಲಿಲ್ಲ. ಆದರೆ ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಇದೀಗ ಆರೋಪಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ನವೀನ್ ಗೌಡ, ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್, ಕಾಂಗ್ರೆಸ್ ಮುಖಂಡ ಪುಟ್ಟಿ ಅಲಿಯಾಸ್ ಪುಟ್ಟರಾಜ್, ಚೇತನ್ರಿಂದ ಅರ್ಜಿ ಸಲ್ಲಿಕೆ ಮಾಡಲಾಗಿದೆ.