ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಸೂಳೇಬಾವಿಯ ಅಶೋಕ ವಿ ಬಳ್ಳಾ, 2024ನೇ ಸಾಲಿನ ಲಿ. ನೀಲಕಂಠಪ್ಪ ಬಸವಪ್ಪ ಹಾದಿಮನಿ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜ.17 ರಂದು ಹುನಗುಂದ ನಗರದ ಪುರಸಭೆ ಮಂಗಲಭವನದಲ್ಲಿ ನಡೆಯುವ ಲಿ. ಚೆನ್ನಮ್ಮ ನೀಲಕಂಠಪ್ಪ ಹಾದಿಮನಿ ಶರಣ ದಂಪತಿಗಳ 7ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.
ಮಕ್ಕಳೆನ್ನ ಜಗತ್ತು ಅದಕ್ಕೂ ಮಿಗಿಲಿಲ್ಲ ಸಂಪತ್ತು ಎಂಬ ಧ್ಯೇಯವಾಕ್ಯವನ್ನಿಟ್ಟುಕೊಂಡು ಮಕ್ಕಳಿಗಾಗಿ ನಿರಂತರ ಕ್ವಿಜ್ ನಂತಹ ಆನ್ ಲೈನ್ ರಸಪ್ರಶ್ನೆ, ‘ಗೊತ್ತಿರೋರುತ್ತರಿಸಿ’ ಎಂಬ ರಸಪ್ರಶ್ನೆ ಚಟುವಟಿಕೆಗಳ ಮೂಲಕ ಬೋಧನೆಯಲ್ಲಿ ತೊಡಗಿರುವ ಅಶೋಕ ಕೋವಿಡ್ ಕಾಲದಿಂದ ಇಲ್ಲಿಯವರೆಗೂ ನಿರಂತರವಾಗಿ 1,200 ದಿನಗಳಲ್ಲಿ ದಿನಕ್ಕೆ 10 ಪ್ರಶ್ನೆಗಳಂತೆ 12,000 ಬಹು ಆಯ್ಕೆ ಪ್ರಶ್ನೋತ್ತರದ ಕ್ವಿಜ್ ನಡೆಸಿದ್ದಾರೆ.
ಮಕ್ಕಳಿಗಾಗಿ ರಾಜ್ಯದ ವಿವಿಧ ಪತ್ರಿಕೆಗಳಿಗೆ ಕಥೆ, ಕವನ, ಲೇಖನ ಬರೆಯುತ್ತಾರೆ. ‘ನಮಗೂ ರೆಕ್ಕೆಗಳಿದ್ದಿದ್ದರೆ’ ಹಾಗೂ ‘ದೊಡ್ಡೋರೆಲ್ಲ ಹೀಗೇಕೆ?’ ಎಂಬ ಎರಡು ಮಕ್ಕಳ ಕವನ ಸಂಕಲನ ಮತ್ತು ‘ಕರ್ ಕರ್ ಕಪ್ಪೆ’ ಎಂಬ ಮಕ್ಕಳ ಕಥಾ ಸಂಕಲನ ಹೊರತಂದಿದ್ದಾರೆ.
ಇವರ ‘ಮರಿಗುಬ್ಬಿ ಸಾಹಸ’ ಎನ್ನುವ ಮಕ್ಕಳ ಕಥೆ ‘ADVENTURE OF AN YOUNG SPARROW’ ಎಂದು ಇಂಗ್ಲೀಷಿಗೆ ಅನುವಾದಗೊಂಡಿದೆ. ಕ್ಲಬ್ ಹೌಸ್ ಆ್ಯಪ್ ಮೂಲಕ ಸಮಾನ ಮನಸ್ಕರೊಡಗೂಡಿ ಮಕ್ಕಳ ಸಾಹಿತ್ಯ ಕೃತಿಗಳ ಅವಲೋಕನ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಅಶೋಕ ಬಳ್ಳಾ ಮಕ್ಕಳಲ್ಲಿ ಜ್ಞಾನ ಮತ್ತು ಮೌಲ್ಯಗಳ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.
ಅಶೋಕ ಬಳ್ಳಾ ‘ನಾನು ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ. ಎಲೆಮರೆಯ ಕಾಯಿಯಂತೆ ಇನ್ನೂ ಅನೇಕ ಶಿಕ್ಷಕ-ಶಿಕ್ಷಕಿಯರು ನಾವಿನ್ಯಯುತ ಬೋಧನೆಯಲ್ಲಿ ತೊಡಗಿದ್ದಾರೆ. ಈ ಪ್ರಶಸ್ತಿಯನ್ನು ಅವರೆಲ್ಲರಿಗೂ ಸಮರ್ಪಿಸುತ್ತೇನೆ. ಇದು ನನ್ನ ಕ್ರಿಯಾಶೀಲತೆ ಮತ್ತು ಸೃಜನಶಿಲತೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ’ ಎಂದಿದ್ದಾರೆ.