This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsLocal NewsNational NewsState News

ವ್ಯಸನಮುಕ್ತ ದಿನಾಚರಣೆ

ವ್ಯಸನಮುಕ್ತ ದಿನಾಚರಣೆ

ವ್ಯಸನಮುಕ್ತ ಸಮಾಜಕ್ಕೆ ಡಾ. ಮಹಾಂತ ಶಿವಯೋಗಿಗಳ ಜೋಳಿಗೆ ಯೋಜನೆ ನಾಂದಿ
ಅರಿವೆಯ ಚೀಲವನ್ನು ಹಿಡಿದು ಮನೆಯಿಂದ ಮನೆಗೆ ಹೋಗಿ ಕುಟುಂಬ- ಸಮಾಜ- ದೇಶವನ್ನೇ ಹಾಳು ಮಾಡುವ ದುರ್ವ್ಯಸನ ಹಾಗೂ ದುಷ್ಚಟಗಳ ದಾಸ್ಯದಿಂದ ಜನಸಾಮಾನ್ಯರನ್ನು ಹೊರತರಲು ಜನರ ಎಲ್ಲಾ ದುಶ್ಚಟಗಳ ವಸ್ತುಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡು, ಇನ್ನೆಂದೂ ಅವುಗಳನ್ನು ಬಳಸುವುದಿಲ್ಲ ಎಂದು ಪ್ರಮಾಣ ಮಾಡಿಸಿದವರು ಡಾ. ಮಹಾಂತ ಶಿವಯೋಗಿ ಅವರು.

ಹಲವಾರು ಸಮಾಜ ಸುಧಾರಣೆ ಕಾರ್ಯಗಳೊಂದಿಗೆ ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿಯೂ ತಮ್ಮನ್ನು ಸುಮಾರು 45 ವರ್ಷಗಳಿಗೂ ಹೆಚ್ಚು ಕಾಲ ತೊಡಗಿಸಿಕೊಂಡಿದ್ದ ಮಹಾಂತ ಸ್ವಾಮಿಗಳು ಸಮಾಜ ಸುಧಾರಣೆಯ ಮೊದಲ ಹಾಗೂ ಅತಿಮುಖ್ಯ ಹೆಜ್ಜೆ ಮನಃಪರಿವರ್ತನೆ ಎಂಬುದನ್ನು ಅರಿತಿದ್ದರು. ಅಜ್ಞಾನ, ಅನಾರೋಗ್ಯ, ಅಪರಾಧ, ಅಸಮಾನತೆಯಂತಹ ಸಾಮಾಜಿಕ ಪಿಡುಗುಗಳಿಂದ ಮುಕ್ತರಾಗಲು ಮೊದಲು ಮನಸ್ಸನ್ನು ಈ ಪಿಡುಗುಗಳಿಂದ ಮುಕ್ತಗೊಳಿಸಬೇಕು ಎಂದು ಅವರು ನಂಬಿದ್ದರು.

ವಿಜಯಪುರ ಜಿಲ್ಲೆಯ (ಇಂದಿನ ಬಾಗಲಕೋಟೆ ಜಿಲ್ಲೆ) ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಅಗಸ್ಟ್ 1, 1930 ರಲ್ಲಿ ಜನಿಸಿದ ಡಾ|| ಮಹಾಂತ ಶಿವಯೋಗಿಗಳು ತಮ್ಮ 10ನೇ ವಯಸ್ಸಿಗೆ ಸವದಿಯ ವಿರಕ್ತಮಠದ ಕಿರಿಯ ಸ್ವಾಮೀಜಿಗಳಾದರು. ಪೂಜ್ಯರ ಬಾಲ್ಯದ ಹೆಸರು ಮಹಾಂತಯ್ಯ.

ಮುಧೋಳ ಗವಿಮಠದಲ್ಲಿ ಸಂಸ್ಕೃತ ಪಾಠಶಾಲೆಗೆ ಸೇರಿದ ಮಹಾಂತಯ್ಯ ಅವರು ಅಲ್ಲಿ ಮೂರು ವರ್ಷಗಳ ಕಾಲ ಅಧ್ಯಯನ ಮಾಡಿ ನಂತರ 1944 ರಲ್ಲಿ ಶಿವಯೋಗ ಮಂದಿರದಲ್ಲಿ ಆರು ವರ್ಷಗಳ ಕಾಲ ಸಂಸ್ಕೃತ-ಕನ್ನಡ ವಿದ್ಯಾಭ್ಯಾಸ ಮಾಡಿದರು.

ಮುಂದಿನ ವಿದ್ಯಾಭ್ಯಾಸಕ್ಕಾಗಿ ಬನಾರಸ ಅಂದರೆ ಕಾಶಿಗೆ ತೆರಳಿ ಅಲ್ಲಿ ಜಂಗಮವಾಡಿ ಮಠದಲ್ಲಿದ್ದು, ಸಂಸ್ಕೃತ, ಹಿಂದಿ,ಯೋಗ, ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಪರಿಣಿತಿ ಸಾಧಿಸಿದರು.

ನಿರಂತರ ಅನ್ನ ದಾಸೋಹ, ವಚನ ಮಾಂಗಲ್ಯ, ದೇವದಾಸಿ ವಿಮೋಚನಾ ಸಂಸ್ಥೆ, ದೇವದಾಸಿಯರ ಮಕ್ಕಳಿಗೆ ಟ್ರಸ್ಟ್ ಸ್ಥಾಪನೆ, ನಿರುದ್ಯೋಗಿಗಳಿಗೆ ಮತ್ತು ವಿಧವೆಯರಿಗೆ ಕಾಯಕ ಸಂಜೀವಿನಿ ಸಂಸ್ಥೆ, ನಿಸರ್ಗ ಚಿಕಿತ್ಸೆ-ಯೋಗ ಕೇಂದ್ರ ಸ್ಥಾಪಿಸಿದ ಜೊತೆಗೆ ಶಾಖಾ ಮಠಗಳಿಗೆ ಪ.ಜಾತಿ ಮತ್ತು ಪಂಗಡಗಳ ಯುವಕರಿಗೆ ಧರ್ಮ ಸಂಸ್ಕಾರ ನೀಡಿ ಪಟ್ಟಾಭಿಷೇಕ ಮಾಡಿದ್ದು, ಮಹಿಳಾ ಸಾಧಕಿಯರಿಗೆ ಜಂಗಮ ದೀಕ್ಷೆ ನೀಡಿ ಮಠಾಧಿಕಾರಿಯನ್ನಾಗಿ ಮಾಡಿದ್ದು, ಮಠದ ನೂರಾರು ಎಕರೆ ಭೂಮಿಯನ್ನು ಆಯಾ ಗ್ರಾಮಗಳ ರೈತರಿಗೆ ಕೃಷಿ ಮಾಡಿ ಬದುಕಲು ನೀಡಿದ್ದು ಮುಂತಾದ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದರು.

ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕದಲ್ಲಿ ಭೀಕರ ಬರಗಾಲ ಉಂಟಾಗಿ ಮಳೆ ಬೆಳೆ ಇಲ್ಲದೆ ಹಳ್ಳಿಯ ಜನರು, ದನ-ಕಾರುಗಳು ಆಹಾರ-ನೀರು ಇಲ್ಲದೇ ಸಂಕಷ್ಟಕ್ಕೆ ಒಳಗಾಗಿರುವುದನ್ನು ತಿಳಿದು ಕಾಶಿಯಿಂದ ಹಿಂದಿರುಗಿದ ಅವರು ನೂರಾರು ಗ್ರಾಮಗಳಲ್ಲಿ ಗಂಜಿ ಕೇಂದ್ರ ಆರಂಭಿಸಿ ದಾಸೋಹ ಮಾಡಿದ್ದು ಮಾತ್ರವಲ್ಲದೇ ಗೋಶಾಲೆಗಳನ್ನು ಆರಂಭಿಸಿ ಮೇವು ಮತ್ತು ನೀರಿನ ವ್ಯವಸ್ಥೆ ಮಾಡಿದರು.

ಈ ಎಲ್ಲ ಸೇವೆಗಳಿಗಿಂತ ಹೆಚ್ಚಾಗಿ ಮತ್ತೊಂದು ಮಹತ್ತರ ಸಮಾಜ ಸುಧಾರಕ ಸೇವೆ ಅವರ ಹೆಸರನ್ನು ಸರ್ಕಾರ ಗುರುತಿಸುವಂತೆ ಮಾಡಿದೆ. ಅದೇ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರಾರಂಭಿಸಿದ ಮಹಾಂತ ಜೋಳಿಗೆ ಯೋಜನೆ.
ಮನಸ್ಸು, ದೇಹ, ಕುಟುಂಬ ಹಾಗೂ ದೇಶದ ಸ್ವಾಸ್ಥ್ಯ ಹಾಳು ಮಾಡುವ ವ್ಯಸನ ದಾಸ್ಯವೂ ಸಾಮಾಜಿಕ ಪಿಡುಗುಗಳಲ್ಲಿ ಒಂದು. ಕುಡಿತದ ಚಟದಿಂದ ಪ.ಜಾತಿಯ ಯುವಕನೊಬ್ಬ ಜೀವ ಕಳೆದುಕೊಂಡ ಸುದ್ದಿ ಕೇಳಿ ಅವನ ಕೇರಿಗೆ ಸಾಂತ್ವನ ಹೇಳಲು ತೆರಳಿದ್ದ ಮಹಾಂತ ಶಿವಯೋಗಿ ಸ್ವಾಮಿಗಳಿಗೆ ಆತನ ಪತ್ನಿ ಮತ್ತು ಮಕ್ಕಳು ಉಪವಾಸದಿಂದ ದು:ಖಿಸುವುದನ್ನು ಕಂಡು ಇಂತಹ ಸಾವಿರಾರು ಕುಟುಂಬಗಳ ಕುಡಿತ ಮತ್ತು ಇತರೇ ದುಶ್ಚಟಗಳಿಂದ ಹಾಳಾಗಿರುವುದನ್ನು ಅರಿತರು. ಇಂತಹ ದುಶ್ಚಟಗಳಿಗೆ ಒಳಗಾಗಿರುವವರನ್ನು ವ್ಯಸನ ಮುಕ್ತಗೊಳಿಸುವ ಉದ್ದೇಶದಿಂದ ಮಹಾಂತ ಜೋಳಿಗೆ ಯೋಜನೆಯನ್ನು 1975 ರಿಂದ ಆರಂಭಿಸಿ ಯಶಸ್ವಿ ಸಹ ಆದರು.

ಪ್ರಾಣತೆತ್ತ ಆ ಪ.ಜಾತಿಯ ಯುವಕನ ಕೇರಿಯಿಂದಲೇ ಈ ಯೋಜನೆಯನ್ನು ಪ್ರಾರಂಭಿಸಿದ ಸ್ವಾಮೀಜಿ ಅಲ್ಲಿನ ಗುಡಿಸಲು ಮನೆಗಳಿಗೆ ತೆರಳಿ ಮದ್ಯಪಾನ, ತಂಬಾಕು ಸೇರಿದಂತೆ ಎಲ್ಲಾ ರೀತಿಯ ದುಶ್ಚಟಗಳ ಬಗ್ಗೆ ಅಲ್ಲಿನ ಜನತೆಗೆ ಮನ ಮುಟ್ಟುವಂತೆ ತಿಳುವಳಿಕೆ ನೀಡಿದರು. ಸ್ವಾಮಿಗಳ ಮಾತುಗಳಿಗೆ ಮನ ಕರಗಿ ಪರಿವರ್ತನೆಯಾದ ಜನರು ತಮ್ಮ ಎಲ್ಲಾ ದುಶ್ಚಟಗಳ ವಸ್ತುಗಳನ್ನು ಸ್ವಾಮೀಜಿಯವರ ಜೋಳಿಗೆಗೆ ಹಾಕಿ, ಇನ್ನುಂದೆ ಅವುಗಳನ್ನು ಬಳಸುವುದಿಲ್ಲ ಎಂದು ಪ್ರಮಾಣ ಮಾಡಿದರು.

ಜೊತೆಗೆ “ಶರಣ ಸಿದ್ಧಾಂತ ವಿದ್ಯಾಪೀಠದ ಶಿವಾನುಭವ ತರಬೇತಿ ಶಿಬಿರ” ಗಳನ್ನು ಏರ್ಪಡಿಸಿ ನಾಡಿನ ಪ್ರಖ್ಯಾತ ವೈದ್ಯರು, ಸಮಾಜ ವಿಜ್ಞಾನಿಗಳು,ಸಾಹಿತಿಗಳು, ಸಮಾಜಿಕ ಕಳಕಳಿ ಹೊಂದಿರುವ ಕವಿಗಳು, ಧರ್ಮ ಗುರುಗಳನ್ನು ಆಹ್ವಾನಿಸಿ ಅವರಿಂದ ಉಪನ್ಯಾಸಗಳನ್ನು ಮಾಡಿಸುವ ಮೂಲಕ ವ್ಯಸನಗಳ ಮನಪರಿವರ್ತನೆ ಮಾಡುವುದರ ಜೊತೆಗೆ ಮಕ್ಕಳು, ವಿದ್ಯಾರ್ಥಿಗಳು- ಯುವ ಜನಾಂಗ ಇಂತಹ ಚಟಗಳಿಗೆ ಬಲಿಯಾದಂತೆ ಅರಿವು ಮೂಡಿಸುತ್ತಿದ್ದರು.

ಇದರಿಂದಾಗಿ ಲಕ್ಷಾಂತರ ಜನ ವ್ಯಸನಗಳಿಂದ ಮುಕ್ತರಾಗಿ ಅವರ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿವೆ.

ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನವಾದ ಆಗಸ್ಟ್ 1 ನ್ನು ರಾಜ್ಯ ಸರ್ಕಾರವು ರಾಜ್ಯಾದ್ಯಂತ ವ್ಯಸನ ಮುಕ್ತ ದಿನವನ್ನಾಗಿ ಆಚರಿಸಲು 2022 ರಲ್ಲಿ ನಿರ್ಧರಿಸಿ ಆದೇಶಿಸಿದ್ದು, ಕರ್ನಾಟಕ ರಾಜ್ಯವನ್ನು ವ್ಯಸನ ಮುಕ್ತ ರಾಜ್ಯವಾಗಿ ಮಾಡಲು ಸಾರ್ವಜನಿಕರು ಹಾಗೂ ಯುವಜನತೆ ವ್ಯಸನಗಳಿಂದ ಮುಕ್ತವಾಗಲು ಈ ದಿನಾಚರಣೆಯು ಪ್ರೇರಣೆಯಾಗಲಿದೆ.

ಆಗಸ್ಟ್ 1 ರಂದು ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸುವ ಪ್ರಮಾಣ ವಚನ ಸ್ವೀಕರಿಸಉವುದಲ್ಲದೇ, ಅರಿವು ಜಾಥಾ, ಸಮಾಲೋಚನಾ ಶಿಬಿರಗಳನ್ನು ಆಯೋಜಿಸಿ ಶ್ರೀಗಳ ಜಯಂತಿ ಆಚರಿಸಲಾಗುತ್ತಿದೆ. ಇಂದು ಆಧುನಿಕ ತಂತ್ರಜ್ಞಾನದ ಹತ್ತಾರು ವ್ಯಸನಗಳಿಗೆ ಸಿಲುಕಿರುವ ಯುವಪೀಳಿಗೆಯ ಮನಸ್ಸನ್ನೂ ವ್ಯಸನಮುಕ್ತಗೊಳಿಸಲು ಇಂತಹ ಕಾರ್ಯಕ್ರಮಗಳು ಅತ್ಯಂತ ಪ್ರಸ್ತುತ ಹಾಗೂ ಅಗತ್ಯ.

ಶ್ರೀದೇವಿ. ಎನ್‌ .ಆರ್.,
ಪತ್ರಿಕೋದ್ಯಮ ಪ್ರಶಿಕ್ಷಣಾರ್ಥಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಬೆಂಗಳೂರು ನಗರ ಜಿಲ್ಲೆ

";