ನಿಮ್ಮ ಸುದ್ದಿ ಬಾಗಲಕೋಟೆ
ಆಡಳಿತದಲ್ಲಿ ಪಾರದರ್ಶಕತೆ ಹಾಗೂ ತ್ವರಿತ ಕೆಲಸಕ್ಕಾಗಿ ತರಬೇತಿ ಅಗತ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಿಳಿಸಿದರು.
ನವನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿಂದು ಆಡಳಿತ ತರಬೇತಿ ಕೇಂದ್ರ, ಇ-ಆಡಳಿತ ಮತ್ತು ದತ್ತಾಂಶ ಕೇಂದ್ರ ವಿಶ್ಲೇಷಣಾ ಕೇಂದ್ರ, ಜಿಲ್ಲಾ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಎನ್‍ಇಜಿಡಿ ಸಾಮಥ್ರ್ಯಾಭಿವೃದ್ದಿ ಯೋಜನೆಯಡಿ ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ವಿಷಯ ಕುರಿತು ಎ ವೃಂದದ ಅಧಿಕಾರಿಗಳಿಗೆ ಹಮ್ಮಿಕೊಂಡ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ತಂತ್ರಜ್ಞಾನ ಯುಗದಲ್ಲಿ ಇ-ಆಡಳಿತ ತರಬೇತಿಯಿಂದ ತ್ವರಿತ ವಿಲೇವಾರಿಗೆ ಸಹಕಾರಿಯಾಗಿದೆ. ಇದರ ಜೊತೆಗೆ ಸೈಬರ್ ಸೆಕ್ಯೂರಿಟಿ ಮತ್ತು ಸೈಬರ್ ಹೈಜಿನ್ ಕುರಿತ ತರಬೇತಿನೂ ಅಷ್ಟೇ ಅಗತ್ಯವಾಗಿದೆ. ಇಂತಹ ವಿಷಯಗಳ ತರಬೇತಿಯನ್ನು ಅಧಿಕಾರಿಗಳ ವರ್ಗಕ್ಕೆ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಗಂಗಾಧರ ದಿವಟರ ಮಾತನಾಡಿ ಕೋವಿಡ್ ಹಿನ್ನಲೆಯಲ್ಲಿ ತರಬೇತಿಯನ್ನು ಆನ್‍ಲೈನ್ ಮೂಲಕ ಹಮ್ಮಿಕೊಳ್ಳಲಾಗುತ್ತಿದ್ದು, ಮುಖಾಮುಖಿಯಾಗಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ತಂತ್ರಜ್ಞಾನ ಬದಲಾವಣೆಯಾದಂತೆ ಆಡಳಿತದಲ್ಲಿ ಚುರುಕು ಮೂಡಿಸಲು ಇ-ಆಡಳಿತ, ಸೈಬರ್ ಸೆಕ್ಯೂರಿಟಿ ವಿಷಯ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿದೆ. ಹಂತ ಹಂತವಾಗಿ ಇತರೆ ವಿಷಯಗಳ ಕುರಿತು ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವುದೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಬಸವೇಶ್ವರ ಇಂಜಿನೀಯರಿಂಗ್ ಕಾಲೇಜಿನ ಪ್ರೊ.ಡಾ.ಎಸ್.ಎಂ.ಹತ್ತೂರೆ ಸೈಬರ್ ಸೆಕ್ಯೂರಿಟಿ, ಸೈಬರ್ ಹೈಜಿನ್ ಕುರಿತು ತರಬೇತಿ ನೀಡಿದರೆ, ಸೈಬರ್ ಅಪರಾಧಗಳನ್ನು ಹೇಗೆ ನಿರ್ವಹಿಸುವದು ವಿಷಯ ಕುರಿತು ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ವಿಜಯ ಮುರಗುಂಡಿ ತರಬೇತಿ ನೀಡಿದರು. ಬಸವೇಶ್ವರ ಇಂಜಿನೀಯರಿಂಗ್ ಕಾಲೇಜಿನ ಪ್ರೊ.ವಿಲಾಸ್ ನಾಯಕ ಅವರು ಕರ್ನಾಟಕದಲ್ಲಿ ಇ-ಆಡಳಿತ, ಪರಿಕಲ್ಪನೆ, ಪ್ರಾಮುಖ್ಯತೆ, ಇ-ಆಡಳಿತದ ಅಗತ್ಯತೆ, ಪ್ರಯೋಜನಗಳ ಬಗ್ಗೆ ತಿಳಿಸಿಕೊಟ್ಟರು.
ತರಬೇತಿಯಲ್ಲಿ ಜಮಖಂಡಿ ಉಪ ವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಬಿರಾದಾರ, ತೋಟಗಾರಿಕೆ ಉಪನಿರ್ದೇಶಕ ರಾಹುಲ್‍ಕುಮಾರ ಬಾವಿದಡ್ಡಿ, ಬಿಟಿಡಿಎ ಮುಖ್ಯ ಇಂಜಿನೀಯರ್ ಅಶೋಕ ವಾಸನದ ಸೇರಿದಂತೆ ಇತರೆ ಎ ವೃಂದರ ಅಧಿಕಾರಿಗಳು ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯ ಎಂ.ಬಿ.ಗುಡೂರ ವಂದಿಸಿದರು.
ತರಬೇತಿಯ ನಂತರ ಜರುಗಿದ ಸಮಾರೋಪ ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಟಿ.ಭೂಬಾಲನ ಭಾಗವಹಿಸಿ ತರಬೇತುದಾರರಿಗೆ ಪ್ರಮಾಣ ಪತ್ರ ವಿತರಿಸಿದರು.