ಮುಖ್ಯಮಂತ್ರಿ ಭರವಸೆ
ನಿಮ್ಮ ಸುದ್ದಿ ಬೆಂಗಳೂರು
2022-23ನೇ ಸಾಲಿನ ಆಯವ್ಯಯದಲ್ಲಿ ಮಂಡಿಸಲಾದ ಹಿಂದುಳಿದ ವರ್ಗಗಳ ಒಡೆತನದ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರಡು ಪುಟಗಳ ಜಾಹೀರಾತು ನೀಡುವ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳುವದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಇಂದು ಮುಖ್ಯಮಂತ್ರಿಗಳ ರೇಸ್ ಕೋರ್ಸ್ ರಸ್ತೆಯಲ್ಲಿನ ಗೃಹ ಕಚೇರಿಯಲ್ಲಿ ಭೆಟಿ ಮಾಡಿ ಮನವಿ ಸಲ್ಲಿಸಿದ ಸಂಘದ ರಾಜ್ಯಾಧ್ಯಕ್ಷರಾದ ಜೆ.ಆರ್.ಕೆಂಚೇಗೌಡ ನೇತೃತ್ವದ ಸಂಪಾದಕರ ನಿಯೋಗಕ್ಕೆ ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಹಿಂದುಳಿದ ವರ್ಗಗಳಿಗೆ ಕೇವಲ ಶಿಕ್ಷಣ ಮತ್ತು ಉದ್ಯೋಗ ವಿಷಯಕ್ಕೆ ಮಾತ್ರ ಅನ್ವಯಿಸುವ ಕೆನೆ ಪದರು ನಿಯಮವು ಹಿಂದುಳಿದ ವರ್ಗಗಳ ಒಡೆತನದ ಪತ್ರಿಕೆಗಳಿಗೆ ಜಾಹೀರಾತು ನೀಡುವ ಯೋಜನೆಗೆ ಅಳವಡಿಸಿರುವುದು ಅವೈಜ್ಞಾನಿಕವಾಗಿದೆ. ಈ ಕೆನೆ ಪದರು ನಿಯಮವು ಈ ಯೋಜನೆಯ ಕಾರ್ಯಾನುಷ್ಠಾನಕ್ಕೆ ಮಾರಕವಾಗಿದ್ದು, ಪ್ರಯುಕ್ತ ಕೆನೆ ಪದರು ನಿಯಮವನ್ನು ರದ್ದುಪಡಿಸಿ ಈ ಯೋಜನೆಯ ಜಾರಿಗೆ ಆದೇಶಿಸಬೇಕು. ಪತ್ರಿಕೆಗಳ ಪ್ರಕಟಣೆಯನ್ನು ಸಾಮಾಜಿಕ ಹೊಣೆಗಾರಿಕೆ ಎಂದು ಪರಿಗಣಿಸಿ ಇತರೆ ವರ್ಗಗಳ ಒಡೆತನದ ಪತ್ರಿಕೆಗಳಿಗೆ ಜಾಹೀರಾತು ನೀಡುವ ಯೋಜನೆಯನ್ನು ವಿಸ್ತರಿಸಬೇಕು. ಮತ್ತು ಪ್ರಸ್ತುತ ಚುನಾವಣಾ ವರ್ಷವಾಗಿದ್ದು, ರಾಜ್ಯ ಮಟ್ಟದ ಪತ್ರಿಕೆಗಳಿಗೆ ಬಿಡುಗಡೆ ಯಾಗುವ ಸರ್ಕಾರದ ಸಾಧನೆಯ ವಿಶೇಷ ಜಾಹೀರಾತುಗಳನ್ನು ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೂ ಬಿಡುಗಡೆ ಮಾಡಬೇಕು. ಕೋವಿಡ್ ಸಂಕಷ್ಟದಿಂದ ಆರ್ಥಿಕವಾಗಿ ತೀವ್ರ ನಲುಗಿರುವ ಪತ್ರಿಕೆಗಳಿಗೆ ಉತ್ತೇಜನ ನೀಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಸಂಪಾದಕರ ನಿಯೋಗವು ಮನವಿ ಮಾಡಿತು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಆದಷ್ಟು ಬೇಗನೆ ಸೂಕ್ತ ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಕುಲಕರ್ಣಿ ಸೇರಿದಂತೆ ಇನ್ನಿತರ ಸಂಪಾದಕರು ಉಪಸ್ಥಿತರಿದ್ದರು.