ಬೆಂಗಳೂರು : ರಾಜಕಾರಣ ಬೇರೆ, ಒಬ್ಬರ ಸಾವನ್ನು ಬಯಸೋದು ಬೇರೆ, ಶಿವರಾಮೇಗೌಡ ಮಾತನಾಡಿರುವ ಪ್ರತಿ ವಿಚಾರದಲ್ಲೂ ರಾಜ್ಯ ಸರ್ಕಾರದ ಕೈವಾಡ ಇದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪ ಮಾಡಿದರು.
ಜೆಪಿ ನಗರದ ನಿವಾಸದ ಬಳಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಎಸ್‌ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸುವುದು ಸೂಕ್ತ. ಶಿವರಾಮೇಗೌಡ ಅವರು ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದರು.
ಭಾನುವಾರ ಶಿವರಾಮೇಗೌಡ ಅವರ ಆಡಿಯೋವನ್ನು ನಾನು ಕೇಳಿದೆ. ಇಡೀ ರಾಜ್ಯದ ಜನ ಶಿವರಾಮೇಗೌಡರ ಆಡಿಯೋವನ್ನು ಕೇಳಿದ್ದಾರೆ. ದೇಶದ ಮಾಜಿ ಪ್ರಧಾನಿಗಳು, ಕೆಂಪುಕೋಟೆ ಮೇಲೆ ಭಾವುಟ ಹಾರಿಸಿದ ಕನ್ನಡದ ಹೆಮ್ಮೆಯ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಈ ರೀತಿ ಲಘುವಾಗಿ ಮಾತನಾಡಬಾರದು.
ರಾಜಕಾರಣ ಬೇರೆ, ಒಬ್ಬರ ಸಾವು ಬಯಸೋದು ಬೇರೆ, ಇದು ಅವರ ಸಂಸ್ಕೃತಿಯನ್ನು ತೋರಿಸುತ್ತೆ. ಶಿವರಾಮೇಗೌಡ ಮಾತನಾಡಿರುವ ಪ್ರತಿ ವಿಚಾರದಲ್ಲೂ ರಾಜ್ಯ ಸರ್ಕಾರದ ಕೈವಾಡ ಇದ್ದು, ಅವರು ಕೂಡಾ ಸರ್ಕಾರದ ಪ್ರಮುಖ ವ್ಯಕ್ತಿಯೊಬ್ಬರ ಹೆಸರು ಹೇಳಿದ್ದಾರೆ ಎಂದು ತಿಳಿಸಿದರು.