ಬಾಗಲಕೋಟೆ
ರಾಜ್ಯಸಭಾ ಸದಸ್ಯನಾದರೂ ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ನನ್ನ ಬೂತ್‌ನ್ನು ಶಕ್ತಿಶಾಲಿಯಾಗಿಟ್ಟುಕೊಳ್ಳುವ ಕರ್ತವ್ಯ ನನ್ನದು ಎಂದು ರಾಜ್ಯಸಭಾ ನೂತನ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.
ನಗರದ ಬವಿವ ಸಂಘದ ಮಿನಿ ಸಭಾಂಗಣದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡ ಸನ್ಮಾನ ಹಾಗೂ ಫಲಾನುಭವಿಗಳ ಸಂಪರ್ಕ ಅಭಿಯಾನದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದರು. ಪಕ್ಷಕ್ಕೆ ನಿಷ್ಠನಾದ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಉನ್ನತ ಹುದ್ದೆ ನೀಡುವ ಏಕೈಕ ಪಕ್ಷ ಅದು ಭಾರತೀಯ ಜನತಾ ಪಕ್ಷವಾಗಿದೆ. ಇಂತಹ ಪಕ್ಷದ ಕಾರ್ಯಕರ್ತನಾಗಿರುವುದಕ್ಕೆ ಹೆಮ್ಮೆಯಿದೆ. ರಾಜ್ಯಸಭಾ ಸದಸ್ಯನಾದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ನನ್ನ ಬೂತ್‌ನ ಸಶಕ್ತೀಕರಣದ ಕರ್ತವ್ಯವನ್ನು ನಾನೇ ವಹಿಸಿಕೊಳ್ಳುವೆ ಎಂದರು.
ಪಕ್ಷದ ಪದಾದಿಕಾರಿಗಳು, ಕಾರ್ಯಕರ್ತರು ತಮ್ಮ ತಮ್ಮ ಬೂತ್‌ನ ಶಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ನಾವೆಲ್ಲ ನಮ್ಮ ಬೂತ್ ಗೆದ್ದರೆ ದೇಶ ಗೆದ್ದಂತೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪಕ್ಷ ನನ್ನನ್ನು ಗುರುತಿಸಿ ರಾಜ್ಯಸಭಾ ಸದಸ್ಯನನ್ನಾಗಿ ಮಾಡಿರುವುದಕ್ಕೆ ಪಕ್ಷದ ಎಲ್ಲ ಹಿರಿಯರಿಗೂ ಹಾಗೂ ಸದಾ ಜತೆಗಿರುವ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಧನ್ಯವಾದ ಸಲ್ಲಿಸುವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ವೀರಣ್ಣ ಚರಂತಿಮಠ, ನಾರಾಯಣಸಾ ಭಾಂಡಗೆ ಅವರು ರಾಜ್ಯಸಭಾ ಸದಸ್ಯರಾಗಿದ್ದರಿಂದ ಜಿಲ್ಲೆಯಲ್ಲಿ ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ. ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇದೆ ಎಂಬುದಕ್ಕೆ ಇವರೇ ಸಾಕ್ಷಿ. ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ನೀಡಿದ ಜವಾಬ್ದಾರಿ ನಿರ್ವಹಿಸುವ ಮೂಲಕ ಮತ್ತೊಮ್ಮೆ ಮೋದಿ ಅವರನ್ನೇ ಪ್ರಧಾನಿಯನ್ನಾಗಿಸೋಣ ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಅಶೋಕ ಲಿಂಬಾವಳಿ, ರಾಜು ರೇವಣಕರ, ಸದಾನಂದ ನಾರಾ, ವೀರಣ್ಣ ಹಳೆಗೌಡರ, ಗುಂಡುರಾವ ಶಿಂಧೆ, ಮಹೇಶ ಅಥಣಿ, ಗುರುಬಸವ ಸೂಳಿಬಾವಿ, ಮಹಾಂತೇಶ ಶೆಟ್ಟರ, ಸತ್ಯನಾರಾಯಣ ಹೇಮಾದ್ರಿ, ರಾಜು ಮುದೇನೂರ, ಶಿವಾನಂದ ಟವಳಿ, ಭಾಗ್ಯಶ್ರಿ ಹಂಡಿ, ಅನಿತಾ ಸರೋದೆ, ಶಶಿಕಲಾ ಮಜ್ಜಗಿ, ಶೋಭಾರಾವ್, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಮಲ್ಲಿಕಾರ್ಜುನ ಕಾಂಬಳೆ, ನಾಗರಾಜ ನಾರಯಣಕರ, ಪ್ರಭು ಹಡಗಲಿ, ಸಾಗರ ಬಂಡಿ, ಬಸವರಾಜ ಅವರಾದಿ ಇತರರಿದ್ದರು.