ನಿಮ್ಮ ಸುದ್ದಿ ಬಾಗಲಕೋಟೆ
ರಾಜ್ಯ ಹೆದ್ದಾರಿಯಲ್ಲಿ ಅತಿಕ್ರಮಣಗೊಂಡ ಫುಟ್‌ಪಾತ್ ತೆರವು ಕಾರ್ಯಕ್ಕೆ ಅಮೀನಗಡ ಪಟ್ಟಣ ಪಂಚಾಯಿತಿ ಆಡಳಿತ ಮುಂದಾಗಿದ್ದು ಮೊದಲ ಬಾರಿ ಭಾನುವಾರ ರಸ್ತೆ ಅಕ್ಕಪಕ್ಕದಲ್ಲಿ ನಡೆಯುವ ಸಂತೆಗೆ ಬ್ರೇಕ್ ಹಾಕಿದೆ.
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಪ್ರತಿ ಭಾನುವಾರ ಸಂತೆ ಮಾರುಕಟ್ಟೆ ರಾಜ್ಯ ಹೆದ್ದಾರಿ ಪಕ್ಕದಲ್ಲೇ ನಡೆಯುತ್ತದೆ. ಅದರೊಂದಿಗೆ ಫುಟ್‌ಪಾತ್ ಸಹ ಅತಿಕ್ರಮಣಗೊಂಡು ಪ್ರತಿ ಭಾನುವಾರ ರಾಜ್ಯ ಹೆದ್ದಾರಿಯೇ ಮಾಯವದಂತಾಗಿರುತ್ತಿತ್ತು.
ಹೀಗಾಗಿ ಜನ ಸಂದಣಿ ಹೆಚ್ಚಾಗಿ ಹಲವು ಭಾರಿ ಅಪಘಾತಗಳು ಉಂಟಾಗಿದ್ದವು. ಇಂತಹ ಪರಿಸ್ಥಿತಿ ಫುಟ್‌ಪಾತ್ ಅತಿಕ್ರಮಣ ಕಂಡ ಬಾಗಲಕೋಟೆ ಕ್ಷೇತ್ರದ ಶಾಸಕರೂ ಸಹ ತೆರವುಗೊಳಿಸಲು ಕಳೆದೊಂದು ತಿಂಗಳ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ಸೂಚನೆ ನೀಡಿದ್ದರು.
ಫುಟ್‌ಪಾತ್ ಅತಿಕ್ರಮಣ ಕುರಿತಂತೆ ಪಟ್ಟಣ ಪಂಚಾಯಿತಿಯಿಂದ ನೋಟೀಸ್ ಸಹ ಜಾರಿಯಾಗಿತ್ತು. ಈಗ ಮೊದಲ ಹಂತವಾಗಿ ಏ.೪ರ ಭಾನುವಾರದಂದು ನಡೆಯುವ ರಾಜ್ಯ ಹೆದ್ದಾರಿ ಅಕ್ಕಪಕ್ಕದ ಸಂತೆ ಮಾರುಕಟ್ಟೆಯಲ್ಲಿ ತೆರವುಗೊಳಿಸುವಲ್ಲಿ ಪಪಂ ಆಡಳಿತ ಮುಂದಾಗಿದ್ದು ಪೊಲೀಸರ ಸಹಕಾರದೊಂದಿಗೆ ರಾಜ್ಯ ಹೆದ್ದಾರಿಯಲ್ಲಿ ಸುಲಭ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.
ಪಪಂ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಕಿರಿಯ ಆರೋಗ್ಯ ನಿರೀಕ್ಷಕ ಸಂತೋಷ ವ್ಯಾಪಾರಿಮಠ, ಬಸೀರ ಕಮಾನಘರ, ಮಂಜುನಾಥ ಪೂಜಾರಿ, ಆನಂದ ತಳಗಡೆ, ಪಿ.ಬಿ.ರುದ್ರಸ್ವಾಮಿಮಠ, ಕನಕಪ್ಪ ಮರ್ಜಿ ಹಾಗೂ ಸಿಬ್ಬಂದಿ ಭಾನುವಾರ ಬೆಳಗ್ಗೆಯಿಂದಲೇ ರಸ್ತೆ ಪಕ್ಕ ಸಂತೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ. ಜತೆಗೆ ಕೊರೊನಾ ಜಾಗೃತಿಯ ಕರಪತ್ರ ಹಂಚುವುದು, ಮಾಸ್ಕ್ ಧರಿಸುವಂತೆ ತಿಳಿಸುವುದು ನಡೆದಿದೆ.