ಬೆಂಗಳೂರು : ಗೃಹ ಸಚಿವ ಅಮಿತ್ ಶಾ ಅವರೇ, ನೀವು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ? ಕರ್ನಾಟಕದ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯನ್ನು ಉಳಿಸುವುದಕ್ಕೋ, ಕೆಡಿಸುವುದಕ್ಕೋ? ನೀವು ಕರ್ನಾಟಕಕ್ಕೆ ಕಾಲಿಟ್ಟಾಗೆಲ್ಲ ಕನ್ನಡಿಗರ ಮನಸ್ಸಿನಲ್ಲಿ ಇಂತಹದ್ದೊಂದು ಪ್ರಶ್ನೆ ಹುಟ್ಟಿಕೊಳ್ಳಲು ನೀವೇ ಕಾರಣವಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಒಂದು ವಾರದೊಳಗೆ ಉನ್ನತಾಧಿಕಾರ ಸಮಿತಿಯ ಸಭೆ ಕರೆಯುತ್ತೇನೆ ಎಂದು ಕಳೆದ ಸೆಪ್ಟೆಂಬರ್‌ನಲ್ಲಿ ನೀವು ನನಗೆ ಆಶ್ವಾಸನೆ ಕೊಟ್ಟಿದ್ದೀರಿ. ವಾರ ಕಳೆದು ತಿಂಗಳುಗಳ ಮೇಲೆ ತಿಂಗಳುಗಳು ಕಳೆದು ಹೋಯಿತು. ಇಲ್ಲಿಯವರೆಗೆ ನೀವು ಸಭೆಯನ್ನೂ ಕರೆದಿಲ್ಲ, ಬರ ಪರಿಹಾರವನ್ನೂ ನೀಡಿಲ್ಲ. ಯಾಕೆ? ಈ ಅನ್ಯಾಯ ಇದೇ ಮೊದಲ ಸಲವೇನಲ್ಲ, 2017ರಲ್ಲಿಯೂ ಕರ್ನಾಟಕದಲ್ಲಿ ಬರಗಾಲ ಬಂದಿತ್ತು. ಇದರಿಂದಾಗಿ ಅಂದಾಜು 30,000 ಕೋಟಿ ರೂ.ನಷ್ಟು ನಷ್ಟ ಉಂಟಾಗಿತ್ತು. ಆಗ ಕೇಂದ್ರ ಸರ್ಕಾರ ನೀಡಿದ್ದು ಕೇವಲ 1,435 ಕೋಟಿ ರೂ. ಪರಿಹಾರ. ಅದೇ ವರ್ಷ ಮಹಾರಾಷ್ಟ್ರಕ್ಕೆ 8,195 ಕೋಟಿ ರೂ. ಮತ್ತು ಗುಜರಾತ್‌ಗೆ 3,894 ಕೋಟಿ ರೂ. ಪರಿಹಾರ ನೀಡಲಾಗಿತ್ತು ಎಂದು ತಿಳಿಸಿದರು.
ಕರ್ನಾಟಕಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪ್ರಶ್ನಿಸಿರುವ ಸಿದ್ದರಾಮಯ್ಯ, ಮಳೆ ಕೊರತೆಯಿಂದಾಗಿ ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಅಂದಾಜು 33,770 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆಯೆಂದು ರಾಜ್ಯ ಸರ್ಕಾರ ಸಮೀಕ್ಷೆ ನಡೆಸಿ ಅಂದಾಜು ಮಾಡಿತ್ತು. ಇದರಲ್ಲಿ ಕನಿಷ್ಠ 17,901 ಕೋಟಿ ರೂಪಾಯಿ ಪರಿಹಾರವನ್ನಾದರೂ ನೀಡಬೇಕೆಂಬುದು ಕರ್ನಾಟಕದ ಬೇಡಿಕೆ. ಇದಕ್ಕಾಗಿ ಪತ್ರದ ಮೇಲೆ ಪತ್ರ ಬರೆದೆವು, ಪ್ರಧಾನಿಯವರ ಜೊತೆ ಬರ ಪರಿಹಾರ ನೀಡುವ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರಾದ ನಿಮ್ಮನ್ನೂ ಭೇಟಿಯಾದೇವು. ಈ ವರೆಗೆ ಒಂದು ಪೈಸೆ ಪರಿಹಾರ ನೀಡಿಲ್ಲ. ಕರ್ನಾಟಕ-ಕನ್ನಡಿಗರ ಬಗ್ಗೆ ಯಾಕೆ ನಿಮಗೆ ಇಷ್ಟು ದ್ವೇಷ? ಎಂದು ಕೇಳಿದ್ದಾರೆ.