ಬೆಂಗಳೂರು : ಹಾಸನದ ಅಶ್ಲೀಲ ಪೆನ್‌ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಮೂರು ಪಕ್ಷಗಳ ನಾಯಕರ ಆರೋಪ/ಪ್ರತ್ಯಾರೋಪಕ್ಕೆ ಈ ವಿಚಾರ ಸರಕಾಗಿ ಹೋಗಿದೆ. ಜೈಲಿನಲ್ಲಿರುವ ದೇವರಾಜೇಗೌಡ ಹೊಸ ಆರೋಪವನ್ನು ಮಾಡಿದ್ದು, ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದರು.
ಪೆನ್‌ಡ್ರೈವ್ ಪ್ರಕರಣದ ಬಗ್ಗೆ ವಕೀಲ ದೇವರಾಜೇಗೌಡ ಹೊಸ ಹೇಳಿಕೆಯನ್ನು ನೀಡಿ, ” ಪೆನ್‌ಡ್ರೈವ್ ಅನ್ನು ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್. ಇದನ್ನು ಹ್ಯಾಂಡಲ್ ಮಾಡಲು ನಾಲ್ವರು ಸಚಿವರ ಸಮಿತಿ ರಚಿಸಿದ್ದರು. ಅಲ್ಲದೇ, ಪೆನ್ಡ್ರೈವ್ ಹಂಚಿಕೆ ಮಾಡಿದ್ದು ಕುಮಾರಸ್ವಾಮಿ ಎಂದು ಹೇಳಲು ನನಗೆ 100 ಕೋಟಿ ಆಫರ್ ನೀಡಿದ್ದರು” ಎಂದು ಗಂಭೀರ ಆರೋಪಿಸಿದರು.
ಇದನ್ನೆಲ್ಲಾ ನಿರ್ದೇಶನ ಮಾಡುತ್ತಿರುವುದು ಅಮಿತ್ ಶಾ ಎಂದು ಅವರೇ ಹೇಳಿದ್ದರು. ಹೀಗಿರುವಾಗ, ಅಮಿತ್ ಶಾ ಅವರೇ ದೇವರಾಜೇಗೌಡರ ಬಾಯಿಯಿಂದ ಈ ಮಾತನ್ನು ಹೇಳಿಸಿರುವ ಸಾಧ್ಯತೆ ಇಲ್ಲ ಎಂದು ಹೇಗೆ ಹೇಳಲು ಸಾಧ್ಯ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ದೇವರಾಜೇಗೌಡರು ವಕೀಲರು, ನ್ಯಾಯಾಧೀಶರ ಮುಂದೆನೇ ಸಾಕ್ಷಿ ಸಮೇತ ಹೇಳಿಕೆಯನ್ನು ನೀಡಬಹುದಾಗಿತ್ತಲ್ಲವೇ? ಮಾಧ್ಯಮಗಳ ಮುಂದೆ ಒಂದು, ಕೋರ್ಟ್ ನಲ್ಲಿ ಇನ್ನೊಂದು ಹೇಳಿಕೆಯನ್ನು ನೀಡಿದರೆ, ಇವರ ಮಾತನ್ನು ನಂಬಲು ಸಾಧ್ಯವೇ ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯ ಪಟ್ಟರು.
ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ದೇವರಾಜೇಗೌಡರ ಈ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿ, ” ಭೀಕರವಾದ ಬರವನ್ನು ಎದುರಿಸುತ್ತಿದ್ದೇವೆ, ಅವರು ಉಲ್ಲೇಖಿಸಿದ ನಾಲ್ವರು ಸಚಿವರಿಗೆ ಬೇರೆ ಕೆಲಸ ಇಲ್ವಾ” ಎಂದು ಖರ್ಗೆ ಪ್ರಶ್ನಿಸಿದರು.