ನಿಮ್ಮ ಸುದ್ದಿ ಬಾಗಲಕೋಟೆ
ಪ್ರತಿ ಕಾಲೇಜಿಗೆ ಹಿರಿಯ ವಿದ್ಯಾರ್ಥಿಗಳು ಸದಾ ಸಂಪರ್ಕದಲ್ಲಿರಬೇಕು. ಅವರ ಸಹಯೋಗ, ಸಹಕಾರದೊಂದಿಗೆ ವಿನೂತನ ಕಾರ್ಯಕ್ರಮಗಳು ಮೂಡಿ ಬರಬೇಕು. ಇದರೊಂದಿಗೆ ಅವರ ಹಳೆಯ ನೆನಪು ಮರುಕಳಿಸಬೇಕು ಎಂದು ಪ್ರಾಚಾರ್ಯ ಡಾ.ವಿ.ಎಸ್.ಕಟಗಿಹಳ್ಳಿಮಠ ಹೇಳಿದರು.
ನಗರದ ಬವಿವ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಿದ್ದ ಸಮ್ಮಿಲನ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ವಿದ್ಯಾರ್ಥಿಗಳು ಇಂದು ದೇಶ-ಅಂತರಾಷ್ಟಿಯ ಮಟ್ಟದಲ್ಲಿ ನಾನಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಮಹಾವಿದ್ಯಾಲಯಕ್ಕೆ ಭೇಟಿ ನೀಡುವುದರಿಂದ ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿದಂತಾಗುತ್ತದೆ ಎಂದರು.
ಗುರುಗಳ ಮತ್ತು ಮಹಾವಿದ್ಯಾಲಯದ ಋಣ ತೀರಿಸಲು ಇದೊಂದು ಉತ್ತಮ ಅವಕಾಶ. ಈ ಸಂಗೀತ ಸಂಜೆ ಹಳೆಯ ವಿದ್ಯಾರ್ಥಿಗಳ ಹೊಸ ಕಾರ್ಯಕ್ರಮಕ್ಕೆ ಅತ್ಯಂತ ಅಭೂತಪೂರ್ವ ಚಾಲನೆ ಆಗಿದೆ. ಹಿರಿಯ ವಿದ್ಯಾರ್ಥಿಗಳಿಗಾಗಿ ಪ್ರತಿ ತಿಂಗಳು ಕಾರ್ಯಕ್ರಮ ಏರ್ಪಡಿಸಿ ಅವರ ಪ್ರತಿಭೆಗೆ ಮುಕ್ತ ವೇದಿಕೆ ಕಲ್ಪಿಸಿಕೊಡಲಾಗುವುದು. ಸಮ್ಮೀಲನ ಸಂಗೀತ ಸಂಜೆ ಕಾರ್ಯಕ್ರಮ ಹಳೆಯ ವಿದ್ಯಾರ್ಥಿಗಳಿಂದ ಸಜ್ಜಾಗಿದೆ. ಸಂಗೀತ ಎಲ್ಲ ರೋಗಕ್ಕೂ ಮದ್ದು. ಸಂಗೀತದಿAದ ಏಕಾಗ್ರತೆ, ತನ್ಮಯತೆ ಹೆಚ್ಚುತ್ತದೆ. ಜಾಗತೀಕರಣದ ಭರಾಟೆಯಲ್ಲಿ ಆತ್ಮ ಸಂತೋಷ ಬಲಿಕೊಟ್ಟು ಕೇವಲ ಯಂತ್ರಗಳಂತಾಗಿದ್ದೇವೆ. ಇದರಿಂದ ಹೊರ ಬರಲು ಇಂತಹ ಕಾರ್ಯಕ್ರಮಗಳು ಸದಾ ಜರುಗುತ್ತಿರಬೇಕು ಎಂದು ಹೇಳಿದರು.
ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಹಾಗೂ ದೂರದರ್ಶನ ಕಲಾವಿದ ಅನಂತ ಕುಲಕರ್ಣಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಿಸಿದರು, ನಂತರ ಶಿವಸ್ತುತಿ, ಬಸವಣ್ಣನವರ ಶರಣ ನಿದ್ರೆಗೈದೊಡೆ ಜಪ ಕಾಣಿರೋ ವಚನ, ಜಿ.ಎಸ್.ಶಿವರುದ್ರಪ್ಪನವರ ಎದೆ ತುಂಬಿ ಹಾಡಿದೆನು, ಕನಕದಾಸರ ಸತ್ಯವಂತರ ಸಂಗವಿರಲು ತೀರ್ಥವೇತಕೋ, ದ.ರಾ.ಬೇಂದ್ರೆ ಅವರ ಭಾವಗೀತೆಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿ ಪುರಂದರ ದಾಸರ ಗೀತೆಯೊಂದಿಗೆ ಮುಕ್ತಾಯಗೊಳಿಸಿದರು.
ಡಾ.ರೇವಣಸಿದ್ದೇಶ ಬೆಣ್ಣೂರ ತಬಲಾ, ರಾಘವೇಂದ್ರ ಗುರುನಾಯಕ ಹಾರ್ಮೋನಿಯಂ, ಮಹೇಶ ಹುಂಡೇಕಾರ ತಾಳ ಸಾಥ್ ನೀಡಿದರು.
ಬಿಎಚ್‌ಆರ್‌ಡಿ ನಿರ್ದೇಶಕ ಎಸ್.ಆರ್.ಮನಹಳ್ಳಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರೊ.ಎ.ಎಸ್.ಕೋಲ್ಹಾರ, ಪ್ರೊ.ಜೆ.ಎಸ್.ಲಾಗಲೋಟಿ ಮಹಾವಿದ್ಯಾಲಯದ ಎಲ್ಲ ಪ್ರಾಧ್ಯಾಪಕರು ಇದ್ದರು.